ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆಶ್ರಯ ಕೊಡಲಾಗದ ಕುಮಾರ್ ಬಂಗಾರಪ್ಪ ಅವರು, ಸ್ವಂತ ತಂದೆಯನ್ನು ಮನೆಯಿಂದ ಹೊರ ದೂಡಿದರು. ಇಂತವರಿಂದ ನೀತಿ ಪಾಠದ ಅವಶ್ಯಕತೆ ನನಗಿಲ್ಲ’ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.
ಸಾಗರ ತಾಲ್ಲೂಕಿನ ಆವಿನಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚೆಗೆ ಮಾಧ್ಯಮಗಳ ಎದುರು ‘ಬಂಗಾರಪ್ಪ ಅವರ ಹಾಗೆ ಕನ್ನಡಕ ಧರಿಸಿದರೆ, ಗೋಪಾಲ ಕೃಷ್ಣ ಬೇಳೂರು ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆಗಲ್ಲ ಎಂದು ಟೀಕಿಸಿದ್ದಾರೆ. ಹೌದು. ‘ನಾನು ಬಂಗಾರಪ್ಪ ಆಗುವುದಕ್ಕೆ ಸಾಧ್ಯವಿಲ್ಲ, ಆದರೆ, ಬಂಗಾರಪ್ಪ ಅವರ ನಿಷ್ಠಾವಂತ ಶಿಷ್ಯನಾಗುತ್ತೇನೆ. ಈ ಸ್ಥಾನ ಪಡೆಯಲು ಕುಮಾರ್ ಬಂಗಾರಪ್ಪ ಅವರಿಂದ ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.
ಕುಮಾರ್ ಬಂಗಾರಪ್ಪ ಅವರಲ್ಲಿ ‘ಬಂಗಾರಪ್ಪ’ ಎನ್ನುವ ಹೆಸರು ಕಿತ್ತು ಬದಿಗಿಟ್ಟರೆ, ಅವರದು ನಾಯಿ ಪಾಡಾಗಲಿದೆ. ಬಂಗಾರಪ್ಪ ಅವರು ನಿಧನ ಹೊಂದಿದಾಗ ಸ್ವಂತ ತಂದೆಯ ಪಾರ್ಥೀವ ಶರೀರ ಹೊರುವ ಸೌಭಾಗ್ಯ ಕೂಡ ಅವರಿಗೆ ಸಿಗಲಿಲ್ಲ. ಆದರೆ, ಇಲ್ಲಿ ಬಂಗಾರಪ್ಪ ಅವರ ಪಾರ್ಥೀವ ಶರೀಕಕ್ಕೆ ನಾನು ಹೆಗಲು ಕೊಟ್ಟಿದ್ದೇನೆ. ಇದು ನನ್ನ ಸೌಭಾಗ್ಯ ಎಂದರು.
ಹಿಂದೆಲ್ಲಾ ಮಾಜಿ ಶಾಸಕ ಹಾಲಪ್ಪ ಕೂಡ ಇದೇ ರೀತಿ ನಾಲಿಗೆ ಹರಿ ಬಿಡುತ್ತಿದ್ದರು. ಕ್ಷೇತ್ರದ ಜನರು ಬಾಲ ಬಿಚ್ಚದಂತೆ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು.