ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ಮಾರ್ಚ್ 21 ರಿಂದ ಕರೆ ನೀಡಲಾಗಿದ್ದ ಸಾರಿಗೆ ಮುಷ್ಕರ ವಾಪಸ್ ಪಡೆಯಲಾಗಿದೆ.
ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇಕಡ 15ರಷ್ಟು ಏರಿಕೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಮಾರ್ಚ್ 1 ರಿಂದಲೇ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಇದನ್ನು ತಿರಸ್ಕರಿಸಿದ್ದ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರ ನಡೆಸಲು ಮುಂದಾಗಿದ್ದರು.
ಅನಂತ್ ಸುಬ್ಬರಾವ್ ಕರೆ ನೀಡಿದ್ದ ಮುಷ್ಕರ ವಾಪಸ್ ಪಡೆಯಲಾಗಿದೆ. 8 ಟ್ರೇಡ್ ಯೂನಿಯನ್ ಗಳು ಕರೆ ನೀಡಿದ್ದ ಮುಷ್ಕರ ಹಿಂಪಡೆಯಲಾಗಿದೆ. ಶೇಕಡ 20ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಮಾರ್ಚ್ 21 ರಂದು ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು.
ಶೇ. 15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿ ಎಂಡಿ ಅನ್ಬುಕುಮಾರ್ ಜೊತೆಗೆ ಸಾರಿಗೆ ಮುಖಂಡರು ಸಭೆ ನಡೆಸಿದ್ದಾರೆ. ಸಂಜೆ 5 ಗಂಟೆಯಿಂದ 7:30ರ ವರೆಗೆ ಸಭೆ ನಡೆಸಲಾಗಿದೆ. ಈ ಹಿಂದೆ ಮುಷ್ಕರದ ವೇಳೆ ವಜಾಗೊಂಡ ನೌಕರರ ಮರು ಸೇರ್ಪಡೆ, ವಾರ್ಷಿಕ ವೇತನ ಬಡ್ತಿ ಹೆಚ್ಚಳದ ಜೊತೆಗೆ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಹಿನ್ನೆಲೆಯಲ್ಲಿ ಮಾರ್ಚ್ 21 ರಿಂದ ಕರೆ ನೀಡಿದ್ದ ಸಾರಿಗೆ ಮುಷ್ಕರ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.