ಬೆಂಗಳೂರು: ಜೂನ್ 11 ರಿಂದ ಶಕ್ತಿ ಯೋಜನೆ ಅಡಿ ಕೆಎಸ್ಆರ್ಟಿಸಿ ಹಾಗೂ ನಗರ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗಲಿದ್ದು, ಶೇಕಡ 50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲಾಗುತ್ತದೆ.
ಟಿಕೆಟ್ ಪಡೆಯುವ ಪುರುಷರಿಗಾಗಿ ಆಸನ ವ್ಯವಸ್ಥೆ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲು ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಾಮಾನ್ಯವಾಗಿ ಬಸ್ ಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರಿಗೆ ಸೀಟು ಮೀಸಲಾದ ಬಗ್ಗೆ ಫಲಕ ಅಳವಡಿಸಲಾಗುತ್ತದೆ. ಇನ್ನು ಮುಂದೆ ರಾಜ್ಯ ರಸ್ತೆ ಸಾರಿಗೆ ಬಸ್ ಗಳಲ್ಲಿ ಶೇಕಡ 50ರಷ್ಟು ಸೀಟ್ ಗಳು ಪುರುಷರಿಗೆ ಮೀಸಲಾಗಿರುತ್ತವೆ.
ಈ ಮೂಲಕ ದೇಶದಲ್ಲೇ ಸಾರಿಗೆ ಬಸ್ ಗಳಲ್ಲಿ ಪುರುಷರಿಗೆ ಶೇಕಡ 50ರಷ್ಟು ಸೀಟು ಮೀಸಲು ವ್ಯವಸ್ಥೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್ ಪ್ರಯಾಣಕ್ಕೆ ಮುಂದಾಗುವ ಸಾಧ್ಯತೆಯಿದ್ದು, ಟಿಕೆಟ್ ಪಡೆದು ಪ್ರಯಾಣಿಸುವ ಪುರುಷರಿಗೆ ಆಸನ ಕೊರತೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಆಸನ ಕೊರತೆಯಾದರೆ ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಮತ್ತಷ್ಟು ಕತ್ತರಿ ಬೀಳುತ್ತದೆ. ಹೀಗಾಗಿ ಟಿಕೆಟ್ ಪಡೆಯುವ ಪುರುಷರಿಗೆ ಶೇಕಡ 50ರಷ್ಟು ಸೀಟ್ ಮೀಸಲಿಡಲಾಗುವುದು ಎಂದು ಹೇಳಲಾಗಿದೆ.