ಬೆಂಗಳೂರು: ಕೆಎಸ್ಆರ್‌ಟಿಸಿ ನೌಕರರ ವೇತನ ಪಾವತಿಗೆ ಸಂಬಂಧಿಸಿದ ಬಿಲ್ ಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಸಿದ್ದಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಆದೇಶಿಸಿದ್ದಾರೆ.
ಇದುವರೆಗೆ ನೌಕರರು ತಮ್ಮ ವೇತನಕ್ಕೆ ಸಂಬಂಧಿಸಿದ ವಿವರಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿಯೇ ವೇತನ ವಿವರಗಳನ್ನು ಸಿದ್ಧಪಡಿಸಿ ಅದರ ಮಾಹಿತಿಯನ್ನು ನೌಕರರಿಗೆ ಸಿಗುವಂತೆ ಮಾಡಬೇಕೆಂದು ಸೂಚಿಸಲಾಗಿದೆ.
ವೇತನದ ಮಾಹಿತಿಗಾಗಿ ನೌಕರರು ಅನೇಕ ವರ್ಷಗಳಿಂದ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೀಗ ಹೆಚ್.ಆರ್.ಎಂ.ಎಸ್. ಬಳಕೆಯಿಂದ ನೌಕರರು ವೇತನ ಚೀಟಿಯನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು. ಸಾಲ ಮತ್ತು ಮುಂಗಡಗಳ ವಿವರಗಳನ್ನು ಕೂಡ ವೀಕ್ಷಿಸಬಹುದು. ವೇತನದಲ್ಲಿ ಕಡಿತವಾದ ಆದಾಯ ತೆರಿಗೆ, ಭವಿಷ್ಯ ನಿಧಿ ಮೊತ್ತ, ಎನ್.ಪಿ.ಎಸ್. ಮೊದಲಾದ ಅಂಶಗಳನ್ನು ಕೂಡ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.