ಅನ್ನದಾತನ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೃಷಿ ಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯಡಿ ಹಲವು ರೀತಿಯ ಕೃಷಿ ಚಟುವಟಿಕೆಗಳಿಗೆ ಪ್ಯಾಕೇಜ್ ಮಾದರಿಯಲ್ಲಿ ಸಹಾಯಧನ ನೀಡಲಾಗುತ್ತದೆ. ಕೃಷಿ ಹೊಂಡ, ಕೃಷಿಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ, ಕೃಷಿಹೊಂಡಕ್ಕೆ ಪಾಲೀಥಿನ್ ಹೊದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ.
ಈ ಯೋಜನೆಯಲ್ಲಿ ಸಹಾಯಧನ ಪಡೆದ ರೈತರು ಸಂಬಂಧಪಟ್ಟ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90% ಸಹಾಯಧನ ನೀಡಲಾಗುತ್ತದೆ.
ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಪಾಸ್ ಪೋರ್ಟ್ ಸೈಜ್ ಫೋಟೊ
ಪಹಣಿ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಹೆಚ್ಚಿನ ಮಾಹಿತಿಗೆ ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.