ಮೈಸೂರು: ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಸಲು ಇನ್ನು ಮುಂದೆ ಟೆಂಡರ್ ಕರೆಯುವುದಿಲ್ಲ. ಹೊಸದಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಾನಸಗಂಗೋತ್ರಿ ಯ ಸೆನೆಟ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆಯೋಜಿಸಿದ್ದ ವಿಭಾಗಿಯ ಮಟ್ಟದ ಫಲಾನುಭವಿಗಳಿಗೆ ಅರಿವು ಕಾರ್ಯಾಗಾರ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಳವೆಬಾವಿ ಕೊರೆಸಲು, ವಿದ್ಯುತ್ ಸಂಪರ್ಕ, ಪಂಪ್ಸೆಟ್ ಮೊದಲಾದ ಸೌಲಭ್ಯ ಕಲ್ಪಿಸಲು ಟೆಂಡರ್ ನೀಡಲಾಗುತ್ತಿತ್ತು. ಇದರ ಬಗ್ಗೆ ಅನೇಕ ದೂರುಗಳು ಬಂದಿದ್ದು, ಟೆಂಡರ್ ಪದ್ಧತಿ ಕೈ ಬಿಟ್ಟು ಫಲಾನುಭವಿಗಳಿಗೆ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಈ ಹಣದಲ್ಲಿ ಬೋರ್ವೆಲ್ ಕೊರೆಸುವುದು, ಪಂಪ್ ಸೆಟ್ ಖರೀದಿ ಸೇರಿದಂತೆ ಎಲ್ಲಾ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಅಲ್ಲದೇ ಯೋಜನೆಯಡಿ ಅರ್ಜಿದಾರರ ವಯಸ್ಸು 60 ವರ್ಷದ ಮೇಲಿರಬೇಕು ಎನ್ನುವ ನಿರ್ಬಂಧವನ್ನು ಕೈ ಬಿಡಲಾಗಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಸಕ್ತ ವರ್ಷದಲ್ಲಿ 1,700 ಕೊಳವೆ ಬಾವಿ ಕೊರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.