ಕೊಪ್ಪಳ: ಮೊರಾರ್ಜಿ ವಸತಿ ಶಾಲೆಯಲ್ಲಿನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜುಗಳಲ್ಲಿ ಸೀನಿಯರ್ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡುವ ಬಗ್ಗೆ ಚಿತ್ರಹಿಂಸೆ ನೀಡಿ ವಿಲಕ್ಷಣವಾಗಿ ನಡೆದುಕೊಳ್ಳುವ ಬಗ್ಗೆ ಕೇಳಿದ್ದೇವೆ. ಆದರೆ ವಸತಿ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಕೊಡಬಾರದ ಹಿಂಸೆ ಕೊಟ್ಟು ವಿಕೃತಿ ಮೆರೆಯುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು 8-9ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂಸಿಸುತ್ತಿದ್ದಾರೆ. ಬಟ್ಟೆ ಒಗೆಸುವುದು, ಪೆನ್ಸಿಲ್ ನಿಂದ ಚುಚ್ಚುವುದು, ಟೆರೇಸ್ ಮೇಲೆ ಕರೆದೊಯ್ದು ಪೊರಕೆಯಿಂದ ಹೊಡೆಯುವುದು, ತಮ್ಮ ಕೋಣೆ ಸ್ವಚ್ಛಗೊಳಿಸುವುದು, ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ವಿಕೃತಿ ಮೆರೆದಿದ್ದಾರೆ. ವಿಷಯ ಬಾಯ್ಬಿಟ್ಟರೆ ಸುಮ್ಮನೆ ಬಿಡಲ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಲೆಯಲ್ಲಿ ಓದುತ್ತಿರುವ 6, 7, 8 ಹಾಗೂ 9ನೇ ತರಗತಿಯ 25ಕ್ಕೂ ಹೆಚ್ಚು ಮಕ್ಕಳಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ಶಾಲೆಗೆ ದೌಡಾಯಿಸಿರುವ ಪೋಷಕರು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲರು, ಶಿಕ್ಷಕರು ವಿಚಾರಿಸಿದಾಗ ಹಿರಿಯ ವಿದ್ಯಾರ್ಥಿಗಳ ದೌರ್ಜನ್ಯ ಬೆಳಕಿಗೆ ಬಂದಿದೆ. ಅಲ್ಲದೇ ಶಾಲೆಗೆ ಗಂಗಾವತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ಈ ಮಧ್ಯೆ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಲಾ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ.