![](https://kannadadunia.com/wp-content/uploads/2023/07/police-crime.png)
ಕೋಲಾರ: ಪ್ರಿಯಕರನೊಂದಿಗೆ ಸೇರಿ ಎರಡನೇ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಬಳಿ ನಡೆದಿದೆ.
ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಕೊಲೆಯಾದ ವ್ಯಕ್ತಿ. ನವಂಬರ್ 25ರಂದು ಶನಿವಾರ ರಾತ್ರಿ ಅಪಘಾತದಲ್ಲಿ ಮಂಜುನಾಥ ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಬಂದಿದೆ. ಸ್ಥಳಕ್ಕೆ ತೆರಳಿದ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸ್ರು ಪರಿಶೀಲನೆ ನಡೆಸಿದಾಗ ಮೃತದೇಹದ ಮೇಲೆ ಮಚ್ಚಿನಿಂದ ಹೊಡೆದ ಗಾಯಗಳಾಗಿರುವುದು ಕಂಡು ಬಂದಿದೆ.
ಅಪಘಾತವಲ್ಲ ಕೊಲೆ ಎಂದು ಪೊಲೀಸರಿಗೆ ಗೊತ್ತಾಗಿದ್ದು, ಮೃತದೇಹವನ್ನು ಮುಳಬಾಗಿಲು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ನಡೆಸಿದ ಸಂದರ್ಭದಲ್ಲಿ ಎರಡನೇ ಪತ್ನಿ ನೇತ್ರಾವತಿ ಮತ್ತು ಆಕೆಯ ಪ್ರಿಯಕರ ಶ್ರೀನಿವಾಸ್ ಸೇರಿ ಕೊಲೆ ಮಾಡಿರುವುದು ಗೊತ್ತಾಗಿದೆ. ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಮಂಜುನಾಥನನ್ನು ಬೈಕ್ ನಿಂದ ಕೆಳಗೆ ಬೀಳಿಸಿ ಮಚ್ಚಿನಿಂದ ಕೊಲೆ ಮಾಡಿ ಶ್ರೀನಿವಾಸ್ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಮಂಜುನಾಥ್ ಮೃತಪಟ್ಟಿರುವಂತೆ ಬಿಂಬಿಸಿದ್ದಾರೆ. ಆದರೆ, ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.
22 ವರ್ಷಗಳ ಹಿಂದೆ ಶ್ರೀನಿವಾಸಪುರ ಮೂಲದ ಸೌಭಾಗ್ಯ ಅವರನ್ನು ಮದುವೆಯಾಗಿದ್ದ ಮಂಜುನಾಥ್ 10 ವರ್ಷ ಸಂಸಾರ ಮಾಡಿ ಆಕೆಯಿಂದ ದೂರವಾಗಿ ನೇತ್ರಾವತಿ ಮದುವೆಯಾಗಿ ಬಂಗಾರಪೇಟೆಯಲ್ಲಿ ವಾಸವಾಗಿದ್ದ. ಎರಡನೇ ಪತ್ನಿ ನೇತ್ರಾವತಿ ಹಾಗೂ ಶ್ರೀನಿವಾಸ್ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥನ್ ನನ್ನು ಕೊಲೆ ಮಾಡಿದ್ದಾರೆ.