
ಆಹಾರ, ಆರೋಗ್ಯ ಎರಡೂ ನಮ್ಮ ಕೈನಲ್ಲೇ ಇದೆ. ನಾವು ಏನು ತಿನ್ನಬೇಕು, ಯಾವೆಲ್ಲ ಒಳ್ಳೆ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಕೆಲವರು ತಡರಾತ್ರಿ ಆಹಾರ ಸೇವನೆ ಮಾಡುವುದಲ್ಲದೆ, ಊಟವಾದ ತಕ್ಷಣ ನಿದ್ರೆಗೆ ಜಾರುತ್ತಾರೆ. ಇದು ಅವರ ಆರೋಗ್ಯದ ಮೇಲೆ ಅರಿವಿಲ್ಲದೆ ಪರಿಣಾಮ ಬೀರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ, ತೂಕದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ತೂಕ ನಿಯಂತ್ರಣದಲ್ಲಿರಬೇಕು, ರಾತ್ರಿ ಸರಿಯಾಗಿ ನಿದ್ರೆ ಬರಬೇಕು, ತಿಂದ ಆಹಾರ ಜೀರ್ಣವಾಗಬೇಕು ಎಂದಾದರೆ ನೀವು ರಾತ್ರಿ ಊಟವಾದ ಮೇಲೆ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಬೇಕು.
ಹೆಚ್ಚುವರಿ ಕೆಲಸವನ್ನು ನೀವು ಮಾಡಬೇಕಾಗಿಲ್ಲ. ಊಟವಾದ ನಂತ್ರ ವಾಕಿಂಗ್ ಮಾಡಬೇಕು. ವಾಕಿಂಗ್ ನಿಮ್ಮ ದೇಹಕ್ಕೆ ಅತ್ಯಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ರಾತ್ರಿ ಊಟವಾದ ಮೇಲೆ 15 ರಿಂದ 30 ನಿಮಿಷಗಳ ಕಾಲ ನಡೆಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯುವ ಕಾರಣ ನಿಮ್ಮ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಗ್ಯಾಸ್, ನಿದ್ರಾಹೀನತೆ ಸಮಸ್ಯೆಗಳು ನಿವಾರಣೆಯಾಗಿ ಹೃದಯದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಊಟದ ನಂತ್ರ ವಾಕಿಂಗ್ ಮಾಡುವ ವೇಳೆ ನಡಿಗೆಯ ತೀವ್ರತೆ, ಸಮಯ ಹಾಗೂ ದೂರವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.
ರಾತ್ರಿ ಊಟದ ನಂತ್ರ ಮಾಡುವ ವಾಕಿಂಗ್ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ವಾಕಿಂಗ್ ಮಾಡಿದಾಗ ಎಂಡಾರ್ಫಿನ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದು ನೈಸರ್ಗಿಕ ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ಒತ್ತಡ ಕಡಿಮೆ ಆಗುವುದಲ್ಲದೆ ನಿದ್ರೆ ಸರಿಯಾಗಿ ಬರುತ್ತದೆ. ರಾತ್ರಿಯ ಊಟದ ನಂತರ 30 ನಿಮಿಷ ಅಥವಾ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ನಂತರ ಮೂರು ಬಾರಿ 10 ನಿಮಿಷ ನೀವು ನಡೆಯಬಹುದು.