ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಕೆಕೆಆರ್ಟಿಸಿ) ಸಿಬ್ಬಂದಿಗೆ ಪ್ರೀಮಿಯಂ ರಹಿತ 1.20 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತರಲಾಗಿದೆ.
ಕೆಕೆಆರ್ಟಿಸಿ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ವಲಯದ ಮುಖ್ಯಸ್ಥ ನವನೀತ್ ಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸಾರಿಗೆ ನಿಗಮದ ಸಿಬ್ಬಂದಿಗೆ ಅಪಘಾತದಿಂದ ಸಾವು ನೋವು ಗಮನಿಸಿ ನಿಗಮವು ವೈಯಕ್ತಿಕ ಮತ್ತು ಕರ್ತವ್ಯನಿರತ ಸಮಯದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗವಿಕಲತೆಗೆ ಒಳಗಾದಲ್ಲಿ ಸಿಬ್ಬಂದಿಗೆ ಗಣನೀಯ ಮೊತ್ತದ ದೊರೆಯುವಂತೆ ಮಾಡುವ ಉದ್ದೇಶದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಯೂನಿಯನ್ ಸೂಪರ್ ಸ್ಯಾಲರಿ ಅಕೌಂಟ್ ಯೋಜನೆಯ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರೀಮಿಯಂ ರಹಿತವಾಗಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಯೋಜನೆ ಅನ್ವಯ ಯೂನಿಯನ್ ಬ್ಯಾಂಕ್ ನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತದಲ್ಲಿ ನಿಧನರಾದ ಸಂದರ್ಭದಲ್ಲಿ ನೌಕರರ ಅವಲಂಬಿತರಿಗೆ 1.20 ಕೋಟಿ ರೂ. ಅಪಘಾತ ವಿಮೆ ಹಣ ದೊರೆಯಲಿದೆ. ನೌಕರರು ಶಾಶ್ವತ ಮತ್ತು ಭಾಗಶಃ ಅಂಗ ನ್ಯೂನ್ಯತೆಗೆ ಒಳಗಾದಲ್ಲಿ 1 ಕೋಟಿ ರೂ. ಪಡೆಯಬಹುದಾಗಿದೆ. ಡೆಬಿಟ್ ಕಾರ್ಡ್ ಮೇಲೆ 15 ಲಕ್ಷ ರೂಪಾಯಿ ಅಪಘಾತ ವಿಮಾ ಸೌಲಭ್ಯ ಜಾರಿ ಮಾಡಲಾಗಿದ್ದು, ಸ್ವಾಭಾವಿಕ ಮರಣಕ್ಕೆ 5 ಲಕ್ಷ ರೂ. ವಿಮೆ ಸಹಿತ ಇತರೆ ಹೆಚ್ಚುವರಿ ಸೌಲಭ್ಯ ನೀಡಲಾಗುವುದು.