ಬೆಂಗಳೂರು: ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ಘಟನೆ ಭದ್ರಪ್ಪ ಲೇಔಟ್ ನಲ್ಲಿ ನಡೆದಿದೆ.
48 ವರ್ಷದ ಎಂ. ಶೋಭಾ ಕೊಲೆಯಾದವರು. ಶೋಭಾ ಅವರ ಪುತ್ರಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಭದ್ರಪ್ಪ ಲೇಔಟ್ ಗಣೇಶ ನಗರದ ಬಾಡಿಗೆ ಮನೆಯಲ್ಲಿ ಪುತ್ರಿಯೊಂದಿಗೆ ಶೋಭಾ ನೆಲೆಸಿದ್ದಾರೆ. ಏಪ್ರಿಲ್ 4ರಂದು ಪುತ್ರಿಯ ಮದುವೆಯಾಗಿದ್ದು, ಏಪ್ರಿಲ್ 18ರಂದು ಜೆಪಿ ನಗರದ ಪತಿ ಮನೆಗೆ ತೆರಳಿದ್ದರು. ಶೋಭಾ ಅವರು ಒಬ್ಬರೇ ಮನೆಯಲ್ಲಿದ್ದರು.
ಏಪ್ರಿಲ್ 19 ರಂದು ಬೆಳಿಗ್ಗೆ ತಾಯಿಗೆ ಅನೇಕ ಬಾರಿ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಸಂಜೆ 7 ಗಂಟೆ ಸುಮಾರಿಗೆ ಮನೆ ಬಳಿ ಬಂದು ನೋಡಿದಾಗ ಬೆಡ್ ರೂಮ್ ನಲ್ಲಿ ತಾಯಿಯ ಕೊಲೆಯಾಗಿರುವುದು ಕಂಡು ಬಂದಿದೆ. ಮೊಬೈಲ್, ಕಾರ್, ಶೋಭಾ ಅವರ ಕುತ್ತಿಗೆಯಲ್ಲಿದ್ದ ಎರಡು ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಪೊಲೀಸರಿಗೆ ದೂರು ನೀಡಿದ್ದು, ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳು ಮತ್ತು ಇತರೆ ತಾಂತ್ರಿಕ ಅಂಶದ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.