
ಬೆಂಗಳೂರು: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಧೈರ್ಯ ಸಾಲದೆ ಪೊಲೀಸರಿಗೆ ಶರಣಾಗಿದ್ದಾನೆ.
ಕುಂದಲಹಳ್ಳಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆ. ಮಂಗಳೂರು ಮೂಲದ ತಾರಾನಾಥ್ ಮತ್ತು ಸರಿತಾ 11 ವರ್ಷಗಳ ಹಿಂದೆ ಮದುವೆಯಾಗಿ ಕುಂದಲಹಳ್ಳಿಯಲ್ಲಿ ನೆಲೆಸಿದ್ದಾರೆ. ದಂಪತಿಗೆ ಮಕ್ಕಳು ಇರಲಿಲ್ಲ. ಪಾನಿಪುರಿ ಅಂಗಡಿ ನಡೆಸುತ್ತಿದ್ದ ತಾರಾನಾಥ್ ಆರ್ಥಿಕ ಸಂಕಷ್ಟದಿಂದ ಪರಿಚಯಸ್ಥರ ಬಳಿ ಕೈಸಾಲ ಪಡೆದುಕೊಂಡಿದ್ದ. ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ಸಾಲಗಾರರ ಕಾಟ ಶುರುವಾಗಿತ್ತು.
ಇದರಿಂದ ಮನನೊಂದ ತಾರಾನಾಥ್ ತಾನು ಮೃತಪಟ್ಟರೆ ಪತ್ನಿ ಅನಾಥವಾಗುತ್ತಾಳೆ ಎಂದು ಯೋಚಿಸಿ ಶನಿವಾರ ರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊನೆ ಕ್ಷಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದು ಮನೆ ಮಾಲೀಕರಿಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿ ಕೊಲೆ ವಿಚಾರ ತಿಳಿಸಿ ವೈಟ್ ಫೀಲ್ಡ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.