ಬೆಂಗಳೂರು : ಹಣಕಾಸು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕರ ವಿರುದ್ಧ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಲು ಕೋರ್ಟ್ ಗೆ ಬಂದಿದ್ದು, ಬೆಂಗಳೂರಿನ ಜೆಎಂಎಫ್ ಸಿ ಕೋರ್ಟ್ ಅರ್ಜಿ ಸ್ವೀಕರಿಸಿದೆ.
ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ಸುದೀಪ್ ಅರ್ಜಿ ಸ್ವೀಕರಿಸಿದ ಕೋರ್ಟ್ ಆಗಸ್ಟ್ 17 ಕ್ಕೆ ವಿಚಾರಣೆ ಮುಂದೂಡಿದೆ. ನಂತರ ಕೋರ್ಟ್ ಆವರಣದಲ್ಲಿ ಮಾತನಾಡಿದ ನಟ ಸುದೀಪ್ ‘ ಕಾನೂನು ವ್ಯಾಪ್ತಿಯಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ, ಕರ್ನಾಟಕ ವಾಣಿಜ್ಯ ಮಂಡಳಿ ನನಗೆ ತಾಯಿ ಸಮಾನ, ನನ್ನ ವಿರುದ್ಧದ ಆರೋಪಕ್ಕೆ ಲೀಗಲ್ ನೋಟಿಸ್ ಕೊಟ್ಟಿದ್ದೇನೆ. ಆದರೆ ಅವರು ಉತ್ತರ ಕೊಡಲಿಲ್ಲ. ಅದಕ್ಕೆ ಕೋರ್ಟ್ ಗೆ ಬಂದಿದ್ದೇನೆ ಎಂದರು. ಬಾಯಿ ಇದೆ ಎಂದು ಬೇಕಾಬಿಟ್ಟಿ ಮಾತನಾಡುವುದಲ್ಲ, ಎಲ್ಲಾ ಆರೋಪಗಳಿಗೂ ಕಾನೂನು ವ್ಯಾಪ್ತಿಯಲ್ಲಿ ತಕ್ಕ ಉತ್ತರ ನೀಡಲಿದ್ದೇನೆ ಎಂದರು. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಹಾಗೂ ಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಚಿತ್ರಕ್ಕಾಗಿ ಮುಂಗಡವಾಗಿ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ಎಂ ಎನ್ ಕುಮಾರ್ ಮತ್ತು ರೆಹಮಾನ್ ಆರೋಪ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಿರ್ಮಾಪಕ ಎಂ ಎನ್ ಕುಮಾರ್ ಮಾಡಿದ ಆರೋಪಗಳಿಗೆ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಉತ್ತರ ನೀಡಿದ್ದರು.ಕುಮಾರ್ ಮಾಡಿದ ಆರೋಪಕ್ಕೆ ಉತ್ತರ ನೀಡಿದ ಸುದೀಪ್ 10 ಕೋಟಿ ರೂs ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದರು. ಹಾಗೆಯೇ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿದ್ದಾರೆ, ಸಮಾಜ ಸೇವೆಯ ಮೂಲಕ ಹಲವರಿಗೂ ಮಾದರಿಯಾಗಿದ್ದಾರೆ, ನೀವು ಮಾಡಿರುವ ಆರೋಪ ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿದ್ದೀರಾ..? ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಸುದೀಪ್ ಪರ ವಕೀಲರು ಲೀಗಲ್ ನೋಟಿಸ್ ನೀಡಿದ್ದರು. ಸುದ್ದಿಗೋಷ್ಟಿಯಲ್ಲಿ ಅಧಾರ ರಹಿತ ಆರೋಪ ಮಾಡಿದ್ದಾರೆ. ಆದ್ದರಿಂದ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕೆಂದು ನೋಟಿಸ್ ನಲ್ಲಿ ತಾಕೀತು ಮಾಡಿದ್ದರು. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಟಿ ನಡೆಸಿದ ಕುಮಾರ್ ಕಿಚ್ಚ ಸುದೀಪ್ ಗೆ ಒಂದು ಸಿನಿಮಾದ ಅಡ್ವಾನ್ಸ್ ಕೊಟ್ಟಿದ್ದೇನೆ, ಆದರೆ ಅವರು ಕೈಗೆ ಸಿಗುತ್ತಿಲ್ಲ. ಹಣಕೊಟ್ಟು ಬೇಡುವ ಸ್ಥಿತಿಬಂದಿದೆ ಎಂದು ಕುಮಾರ್ ವಾಣಿಜ್ಯ ಮಂಡಳಿಗೆ ಪತ್ರ ಸಲ್ಲಿಸಿದ್ದರು.