
ಕೇರಳದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಕಾಡಾನೆಗಳ ಹಿಂಡು ನದಿ ದಾಟಿ ಬರುತ್ತಿರುವುದನ್ನು ಚಿತ್ರೀಕರಿಸುತ್ತಿದ್ದ ವಿಡಿಯೋ ಪತ್ರಕರ್ತರೊಬ್ಬರ ಮೇಲೆ ಆನೆ ದಾಳಿ ನಡೆಸಿದ್ದು ಪತ್ರಕರ್ತ ಸಾವನ್ನಪ್ಪಿದ್ದಾರೆ.
ಮಾತೃಭೂಮಿ ಟಿವಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಎವಿ ಮುಖೇಶ್ (34) ಬುಧವಾರ ಪಾಲಕ್ಕಾಡ್‌ನ ಕೊಟ್ಟೆಕ್ಕಾಡ್‌ನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಗಳ ಗುಂಪನ್ನು ಚಿತ್ರೀಕರಿಸಲು ತೆರಳಿದ್ದರು.
ಚಿತ್ರೀಕರಣ ವೇಳೆ ಎ.ವಿ.ಮುಕೇಶ್ ಮುಗ್ಗರಿಸಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಕಂಡು ಕೆರಳಿದ ಆನೆಯೊಂದು ಅವರ ಮೇಲೆ ದಾಳಿ ಮಾಡಿದೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪತ್ರಕರ್ತನ ಪ್ರಾಣ ಉಳಿಸಲಾಗಲಿಲ್ಲ.
ಯುವ ವೀಡಿಯೋ ಪತ್ರಕರ್ತನ ನಿಧನಕ್ಕೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಎಕೆ ಶಸೀಂದ್ರನ್ ಆಘಾತ ವ್ಯಕ್ತಪಡಿಸಿದ್ದಾರೆ.
“ದುರಂತ ಘಟನೆಯ ಸುದ್ದಿಯಿಂದ ನಾವೆಲ್ಲರೂ ತೀವ್ರ ದುಃಖಿತರಾಗಿದ್ದೇವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಆತನನ್ನು ರಕ್ಷಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು” ಎಂದು ಎ.ಕೆ. ಶಶೀಂದ್ರನ್ ಹೇಳಿದರು.
ಎವಿ ಮುಖೇಶ್ ಮಾತೃಭೂಮಿ ಟಿವಿ ವಾಹಿನಿಯ ದೆಹಲಿ ಬ್ಯೂರೋದಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಅವರನ್ನು ಪಾಲಕ್ಕಾಡ್ ಬ್ಯೂರೋಗೆ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ.