ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ತಾರಕಕ್ಕೇರಿದ್ದು, ಹನುಮ ಧ್ವಜ ತೆರವುಗೊಳಿಸಿದ ಜಿಲ್ಲಾಡಳಿತ ಹಾಗೂ ಪೊಲೀಸರು ರಾಷ್ಟ್ರಧ್ವಜ ಹಾರಿಸಿದ್ದಾರೆ. ಸರ್ಕಾರದ ಈ ಕ್ರಮಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕೆರಗೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆದು ಒಂದು ವರದ ಹಿಂದೆಯೇ ಹನುಮ ಧ್ವಜ ಹಾರಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಕರೆದಿರಲಿಲ್ಲ. ಇದೆ ಕಾರಣಕ್ಕಾಗಿ ಈಗ ರಾಜಕೀಯ ದುರುದ್ದೇಶದಿಂದ ಹನುಮ ಧ್ವಜವನ್ನು ತೆರವು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹನುಮ ಧ್ವಜವನ್ನು ತೆರವುಗೊಳಸಬೇಕು ಎಂಬ ಉದ್ದೇಶದಿಂದಲೇ ಈಗ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮಾಧ್ಯಹ್ನ ಹನುಮ ಧ್ವಜ ತೆಗೆದು ಕಾನೂನು ಬಾಹಿರವಾಗಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ಒಂದು ನೀತಿ-ನಿಯಮವಿದೆ ಮನಸ್ಸಿಗೆ ಬಂದಂತೆ ಹಾರಿಸುವುದಲ್ಲ. ಅಧಿಕಾರಿಗಳು ಕೂಡ ಕಾನೂನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.