alex Certify ಖ್ಯಾತ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ಇನ್ನಿಲ್ಲ

ಶಿವಮೊಗ್ಗ: ಖ್ಯಾತ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ನಿಧನರಾಗಿದ್ದಾರೆ.  ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸಜ್ಞರು.ವಿಶೇಷವಾಗಿ ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಇವರು ಒಬ್ಬರು.

ಗುಂಡಾಜೋಯಿಸರು 1931 ರ ಸೆಪ್ಟೆಂಬರ್ 27ರಂದು ಕೆಳದಿಯಲ್ಲಿ ಜನಿಸಿದರು. ತಾಯಿ ಮೂಕಾಂಬಿಕಾ, ತಂದೆ ನಂಜುಂಡ ಜೋಯಿಸರು. ಇವರ ಮೂಲ ಹೆಸರು ಲಕ್ಷ್ಮೀನಾರಾಯಣ. ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಅವರ ಅಜ್ಜಿ ಅವರಿಗೆ ’ಗುಂಡ’ ಎಂದು ಕರೆದಿದ್ದರಂತೆ. ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗೂ ಸಾಗರದಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ನಂತರ ಜೋಯಿಸರು ವಿದ್ಯಾಭ್ಯಾಸವನ್ನು ಮುಕ್ತಾಯಗೊಳಿಸಿ ಉದ್ಯೋಗವನ್ನು ಹುಡುಕಬೇಕಾಯಿತು. ಆದರೆ ಸುಮಾರಾಗಿ ತಮ್ಮ 50ನೇ ವಯಸ್ಸಿನಲ್ಲಿ ಜೋಯಿಸರು ಮೈಸೂರು ವಿಶ್ವವಿದ್ಯಾನಿಲದದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂ.ಎ. (ಇತಿಹಾಸ) ಪದವಿ ಪಡೆದರು. ಬೆಂಗಳೂರಿನ ಕರಣಿಕರ ವೇದಶಾಲೆಯಲ್ಲಿ ವೇದಾಭ್ಯಾಸ ಮಾಡಿದರು. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿಪ್ರಬೋಧ ಪರೀಕ್ಷೆಗಳಲ್ಲಿಯೂ ಅವರು ತೇರ್ಗಡೆಯಾಗಿದ್ದಾರೆ.

ಗುಂಡಾ ಜೋಯಿಸರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗರಾಗಿ, ಪೋಸ್ಟ್ ಮಾಸ್ತರ ಆಗಿ, ವಿದ್ಯುತ್ ಇಲಾಖೆಯಲ್ಲಿ, ಆಕಾಶವಾಣಿಯಲ್ಲಿ, ವಯಸ್ಕರ ಶಿಕ್ಷಣ ಸಮಿತಿಯಲ್ಲಿ, ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗದ ಸರ್ಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಯಿಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರ್ಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಚಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

1962 ರಿಂದ1975ರವರೆಗೆ ಮೈಸೂರು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದರು. 1980ರಿಂದ 1985ರವರೆಗೆ ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿಯ ಸದಸ್ಯರು ಆಗಿದ್ದರು. ಸಂಶೋಧನಾ ಕ್ಷೇತ್ರ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು- ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ, ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ,ಇಕ್ಕೇರಿ ಅರಸರು,ಬಿದನೂರಿನ ಕೆಳದಿ ನಾಯಕರು,ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯ ಮಹತ್ವದ ಸಾಧನೆ ಗುರುತಿಸಿ ಹಲವು ಗೌರವ, ಪ್ರಶಸ್ತಿಗಳು ಸಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...