ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿ., ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಅಧಿಕಾರಿ-ಸಿಬ್ಬಂಧಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಕ್ಟೋಬರ್ 28 ಮತ್ತು 29ರಂದು ರಾಜ್ಯದಾದ್ಯಂತ ಪರೀಕ್ಷೆಗಳನ್ನು ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗಧಿಪಡಿಸಿದ ಅವಧಿಗೂ ಒಂದು ಗಂಟೆಗಳ ಮುನ್ನ ಪರೀಕ್ಷಾ ಕೇಂದ್ರದಲ್ಲಿದ್ದು, ನಿಯಮಾನುಸಾರ ಪ್ರವೇಶ ಪಡೆಯಬೇಕು. ಹಿಜಾಬ್ ಧರಿಸಿದ ಪರೀಕ್ಷಾರ್ಥಿಗಳು ಸಕಾಲದಲ್ಲಿ ಹಾಜರಿದ್ದು, ತಪಾಸಣೆಗೆ ಒಳಗಾಗಬೇಕು. ಅದಕ್ಕಾಗಿ ಪ್ರತ್ಯೇಕ ಮಹಿಳಾ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು. ನಿಗಧಿತ ಅವಧಿಯ ನಂತರ ಆಗಮಿಸುವ ಪರೀಕ್ಷಾರ್ಥಿಗಳಿಗೆ ಕೇಂದ್ರದ ಪ್ರವೇಶ ನಿರ್ಬಂಧಿಸಲಾಗಿದೆ.
ಪರೀಕ್ಷೆಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಯುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಕೇಂದ್ರದೊಳಕ್ಕೆ ತರುವುದನ್ನು, ಪೂರ್ಣ ತೋಳಿನ ಷರ್ಟ್ ಧರಿಸುವುದನ್ನು, ಶೂ ಹಾಗೂ ಆಭರಣಗಳು ಧರಿಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಪರೀಕ್ಷಾರ್ಥಿಗಳು ಪರೀಕ್ಷಾ ಪ್ರಾಧಿಕಾರದ ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾರ್ಥಿಗಳಲ್ಲದೆ ಇತರೆ ವ್ಯಕ್ತಿಗಳು ಪ್ರವೇಶಿಸುವುದನ್ನು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.