ನವದೆಹಲಿ: ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನಲ್ಲಿ ಇಡಿ ಅಧಿಕಾರಿಗಳು ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಅವರನ್ನು ಬಂಧಿಸಿದ್ದಾರೆ.
ಅವರನ್ನು ಹೈದರಾಬಾದ್ ನಿಂದ ದೆಹಲಿಗೆ ಕರೆದುಕೊಂಡು ಹೋಗಲಾಗಿದೆ. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ತೆಲಂಗಾಣ ಮಾಜಿ ಸಿಎಂ, BRS ಪಕ್ಷದ ನಾಯಕ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.
ಕೆ ಕವಿತಾ ಅವರನ್ನು ದೆಹಲಿಗೆ ಕರೆತರುತ್ತಿರುವ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆಗೊಳಪಡಿಸಲಿದೆ.
ಈ ಹಿಂದೆ ಮಾಜಿ ಸಂಸದೆ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಆದರೆ, ಸಮನ್ಸ್ ನೀಡಿದರೂ ಕಳೆದ ವರ್ಷ ಅಕ್ಟೋಬರ್‌ನಿಂದ ಆಕೆ ಏಜೆನ್ಸಿಯ ಮುಂದೆ ಹಾಜರಾಗಿರಲಿಲ್ಲ. ಮಹಿಳೆಯೊಬ್ಬರನ್ನು ಇಡಿ ತನ್ನ ಕಚೇರಿಗೆ ಕರೆಸಿರುವುದನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಆದಾಯ ತೆರಿಗೆ ಇಲಾಖೆ ಮತ್ತು ಇಡಿ ಅಧಿಕಾರಿಗಳು ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಕವಿತಾ ನಿವಾಸದಲ್ಲಿ ಶೋಧ ನಡೆಸಿದ್ದಾರೆ. ಬಳಿಕ ಅವರನ್ನು ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.