ಬೆಂಗಳೂರು: ಕಾಶಿಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ನೀಡುವ ಸಹಾಯಧನದ ಮೊತ್ತವನ್ನು 5,000 ರೂ.ನಿಂದ 7500 ರೂ.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ರಿಯಾಯಿತಿ ದರದ ಕರ್ನಾಟಕ ಭಾರತ ಗೌರವ ಕಾಶಿದರ್ಶನ ಯೋಜನೆ ಅಡಿ ಬೆಂಗಳೂರಿನಿಂದ 45 ಪ್ರಯಾಣಿಕರನ್ನು ಹೊತ್ತು ವಿಶೇಷ ರೈಲು ಬೆಂಗಳೂರಿನ ಯಶವಂತಪುರ ನೇತ್ರ ರೈಲು ನಿಲ್ದಾಣದಿಂದ ಶನಿವಾರ ಹೊರಟಿದ್ದು, ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸಾಮಾನ್ಯ ಭಕ್ತರಿಗೆ ಕಾಶಿ ಯಾತ್ರೆ ಕೈಗೊಳ್ಳಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲು ಸಹಾಯಧನ ಮೊತ್ತ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಹಾಯಧನ ಹೆಚ್ಚಳ ಮಾಡಲಾಗುವುದು. ನಂತರ ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟು ಎಂಟು ದಿನಗಳ ಕಾಶಿ ಪ್ರವಾಸ ಇದಾಗಿತ್ತು, 20ಸಾವಿರ ರೂಪಾಯಿ ವೆಚ್ಚವಾಗುತ್ತದೆ. ರಾಜ್ಯ ಸರ್ಕಾರ 5000 ರೂ. ಸಹಾಯಧನ ನೀಡಲಿದ್ದು, ಈ ಪ್ಯಾಕೇಜ್ ನಲ್ಲಿ ಪ್ರಯಾಣ ಊಟ, ವಸತಿ ವ್ಯವಸ್ಥೆ, ಧಾರ್ಮಿಕ ಕ್ಷೇತ್ರಗಳ ದರ್ಶನ ವೆಚ್ಚವೂ ಸೇರಿದೆ. 8 ದಿನಗಳ ಯಾತ್ರೆಯಲ್ಲಿ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ರಾಜ್ಯ ಸರ್ಕಾರದಿಂದ IRCTC, ಭಾರತೀಯ ರೈಲ್ವೇ ಇಲಾಖೆ ಸಹಯೋಗದಲ್ಲಿ ವಿಶೇಷ ರೈಲಿನ ಮೂಲಕ ಯಾತ್ರೆ ಕೈಗೊಳ್ಳಲಾಗುವುದು. ಈ ರೈಲಿನಲ್ಲಿ ಅಡುಗೆ ಮನೆ, ವೈದ್ಯರ ತಂಡ, ಸಿಸಿ ಕ್ಯಾಮೆರಾ ವ್ಯವಸ್ಥೆ ಇದೆ.