ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ಅದಾಲತ್ ನಲ್ಲಿ ನ್ಯಾಯಮೂರ್ತಿಗಳಾದ ಜೆ.ಎಮ್. ಖಾಜಿ ಮತ್ತು ಟಿ.ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರಾದ ಎಂ.ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ.ಜಿ. ದಳವಾಯಿ ಈ ರೀತಿಯಾಗಿ ಒಟ್ಟು ಮೂರು ಪೀಠಗಳನ್ನು ಆಯೋಜಿಸಲಾಗಿತ್ತು.
ಸದರಿ ಅದಾಲತನಲ್ಲಿ ಒಟ್ಟು 5೦೦ ಪ್ರಕರಣಗಳನ್ನು ಕೈಗೈತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 235 ಪ್ರಕರಣಗಳನ್ನು 5,86,30,660 ರೂ. ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಈ ಲೋಕ ಅದಾಲತ್ ದಲ್ಲಿ ಸುಮಾರು 10 ವರ್ಷಗಳಿಂದ ಬಗೆಹರೆಯದ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೆಗೌಡ ಮತ್ತು ನ್ಯಾಯವಾದಿ ವಿ. ಜಿ. ದಳವಾಯಿ ಸದಸ್ಯರನ್ನೊಳಗೊಂಡ ಪೀಠವು ಸೂಕ್ತ ಸಲಹೆ ನೀಡುವುದರ ಮೂಲಕ ಮತ್ತು ಉಭಯ ಕಕ್ಷಿದಾರರ ವಕೀಲರುಗಳಾದ ಕಿರಣಕುಮಾರ ಎಸ್. ಚಟ್ಟಿಮಠ ಮತ್ತು ವಸಂತ ಬಿ. ಹೊಲ್ಕರ ಇವರ ಪ್ರಯತ್ನದೊಂದಿಗೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿಗಳು(ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.