ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು, ಕನ್ನಡ ಚಿತ್ರರಂಗ ಬೆಂಬಲ ಘೋಷಿಸಿವೆ.
ಕಾವೇರಿ ನೀರಿಗಾಗಿ ರೈತರು, ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಇಡೀ ಕನ್ನಡ ಚಿತ್ರರಂಗ ಕೂಡ ಸಾಥ್ ನೀಡಿದ್ದು, ಬೆಂಗಳೂರಿನ ಶಿವಾನಂದ ಸರ್ಕಲ್ ನ ಗುರುರಾಜ ಕಲ್ಯಾಣ ಮಂಟಪ ಬಳಿ ಚಿತ್ರರಂಗದ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದ ನಟ ವಿಜಯ್ ರಾಘವೇಂದ್ರ, ಕಾವೇರಿ ನೀರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಪ್ರತಿಬಾರಿ ನಡೆಯುವ ಹೋರಾಟಕ್ಕೂ ಕನ್ನಡ ಚಿತ್ರರಂಗದ ಎಲ್ಲರೂ ಬೆಂಬಲ ನೀಡುತ್ತಾರೆ. ಆದರೆ ಈವರೆಗೂ ನೀರಿನ ಸಮಸ್ಯೆಗೆ ಪರಿಹರ ಮಾತ್ರ ಸಿಕ್ಕಿಲ್ಲ.
ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಘರ್ಷಣೆ. ಎಲ್ಲರೂ ಎಷ್ಟೇ ಧೈರ್ಯ ತುಂಬಿದರೂ ರೈತರಿಗೆ ಮಳೆಯಿಂದ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ. ಮಳೆ ಕೊರತೆಯಂತಹ ಸಂದರ್ಭದಲ್ಲಿ ಯಾವರೀತಿ ಸಮಸ್ಯೆ ಬಗೆಹರಿಸಬೇಕು ಎಂಬುದನ್ನು ಸರ್ಕಾರಗಳು ನಿರ್ಧಾರ ಮಾಡಬೇಕು. ಕಾವೇರಿ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಸರ್ಕಾರಗಳು ನೀಡಬೇಕು ಎಂದು ಹೇಳಿದರು.