
ಟಿಕ್ ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಅಮೆರಿಕಾದ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ.
ಮಾರ್ಚ್ 17ರಂದು ಈ ಅಪಘಾತವಾಗುವ ಕೆಲವೇ ದಿನಗಳ ಮುನ್ನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಜನರನ್ನು ಟೀಕಿಸಿದ್ದ ಕಾರಾ, ಜನರು ತಮ್ಮ ಬೇಜವಾಬ್ದಾರಿ ವರ್ತನೆಯಿಂದಾಗಿ ಹೀಗೆ ಅಪಘಾತಕ್ಕೆ ತುತ್ತಾಗುತ್ತಾರೆ ಎಂದಿದ್ದು, ಸುರಕ್ಷಿತ ಚಾಲನೆಗೆ ಅಗತ್ಯವಿರುವ ಸಕಲ ಸುರಕ್ಷತಾ ಕ್ರಮಗಳನ್ನು ತಾವು ತೆಗೆದುಕೊಳ್ಳುವ ಕಾರಣದಿಂದ ತಮಗೆ ಯಾವುದೇ ರೀತಿಯಲ್ಲೂ ಅಪಘಾತವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾರಾರ ವಿಡಿಯೋ ವೈರಲ್ ಆಗಿತ್ತು.
ಬಹಳ ಮಂದಿ ತನ್ನನ್ನು ಕೆಟ್ಟ ಚಾಲಕಿ ಎಂದು ಬೈದರೂ ಸಹ ತಾನು ಯಾವುದೇ ಅಪಘಾತಕ್ಕೆ ಕಾರಣವಾಗಿಲ್ಲ ಎಂದು ತನ್ನ ಕಾರಿನಲ್ಲಿ ಕುಳಿತ ವೇಳೆ ಈಕೆ ಹೇಳಿದ್ದ ವಿಡಿಯೋವನ್ನು 15 ದಶಲಕ್ಷ ಮಂದಿ ವೀಕ್ಷಿಸಿದ್ದರು.
ಫ್ಲಾರಿಡಾದ ಎಸ್ಕಾಂಬಿಯಾ ಕೌಂಟಿಯಲ್ಲಿ ಹೆದ್ದಾರಿ 29ರಲ್ಲಿ ಪ್ರಯಾಣಿಸುತ್ತಿದ್ದ ಕಾರಾ ಸ್ಯಾಂಟೋರೆಲ್ಲಿ ಚಲಿಸುತ್ತಿದ್ದ ನಿಸ್ಸಾನ್ ಎಸ್‌ಯುವಿಗೆ ಎದುರಿನಿಂದ ತಪ್ಪಾದ ಪಥದಲ್ಲಿ ಬಂದ ಶೆವರ್ಲೆ ಸೆಡಾನ್ ಒಂದು ಢಿಕ್ಕಿ ಹೊಡೆದ ಪರಿಣಾಮ, ಒಂದು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರೂ ಚಾಲಕರು ಮೃತಪಟ್ಟಿದ್ದಾರೆ ಎಂದು ಫ್ಲಾರಿಡಾ ಹೆದ್ದಾರಿ ಪೊಲೀಸರು ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ.
