ಶಿವಮೊಗ್ಗ: ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವೊಲಿಕೆಗೆ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿನಾಯಕರು ವಿಫಲರಾಗಿದ್ದಾರೆ. ಇದೇ ವೇಳೆ ಆರ್.ಎಸ್.ಎಸ್ ನಾಯಕರು ಕೂಡ ಈಶ್ವರಪ್ಪಗೆ ಕರೆ ಮಾಡಿ ಸಮಾಧಾನ ಪಡಿಸುವ ಯತ್ನ ನಡೆಸಿದ್ದಾರೆ. ಆದರೂ ಪಟ್ಟು ಸಡಿಲಿಸದ ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಈ ನಿಟ್ಟಿನಲ್ಲಿ ಹಿರಿಯ ನಾಯಕ ಈಶ್ವರಪ್ಪ ಮನವೊಲಿಕೆಗೆ ಸಂಘಪರಿವಾರದ ನಾಯಕರು ಭಾರಿ ಕಸರತ್ತು ನಡೆಸಿದ್ದಾರೆ.
ಕೆ.ಎಸ್.ಈಶ್ವರಪ್ಪಗೆ ಸಂಘಪರಿವಾರದ ಪ್ರಮುಖ ಗೋಪಾಲ್ ಜಿ ಅಯೋಧ್ಯೆಯಿಂದ ಕರೆ ಮಾಡಿದ್ದು, ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈಶ್ವರಪ್ಪ ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ. ಪ್ರಧಾನಿ ಮೋದಿಯವರ ಶಿವಮೊಗ್ಗ ಕಾರ್ಯಕ್ರಮಕ್ಕೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಹಾಗೂ ಮೋದಿಯವರಿಗೆ ನನ್ನ ಬೆಂಬಲ ಇದ್ದೇ ಇದೆ. ಆದರೆ ಇಂದಿನ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಭೇಟಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.