ಶಿವಮೊಗ್ಗ: ಮಗನಿಗೆ ಲೋಕಸಭಾ ಟಿಕೆಟ್ ಸಿಗದ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದು, ಈಶ್ವರಪ್ಪ ಮನವೊಲಿಕೆಗೆ ರಾಜ್ಯ ನಾಯಕರು ವಿಫಲರಾದ ಬೆನ್ನಲ್ಲೇ ಕೇಂದ್ರ ನಾಯಕರು ಎಂಟ್ರಿಕೊಟ್ಟಿದ್ದಾರೆ.
ಶಿವಮೊಗ್ಗದ ಈಶ್ವರಪ್ಪ ನಿವಾಸಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಭೇಟಿ ನೀಡಿದ್ದಾರೆ. ನಾಯಕರು ಮಾತನಾಡುತ್ತಿದ್ದ ವೇಳೆಯೇ ಈಶ್ವರಪ್ಪ ಎಲ್ಲರನ್ನು ಮನೆಯಲ್ಲಿ ಕೂರಿಸಿ ತಾವು ಹೊರಗೆದ್ದು ಹೋಗಿದ್ದಾರೆ.
ಅರ್ಧಗಂಟೆಗೂ ಹೆಚ್ಚು ಕಾಲ ಕಳೆದರೂ ಈಶ್ವರಪ್ಪ ಸುಳಿವಿಲ್ಲ. ಮನೆಯಿಂದ ಹೊರ ನಡೆದ ಈಶ್ವರಪ್ಪ ನಗರದ ಗೋಪಾಳದಲ್ಲಿ ಆಯೋಜಿಸಿದ್ದ ದೇವಸ್ಥಾನದ ಹೋಮದಲ್ಲಿ ಪಾಲ್ಗೊಂಡಿದ್ದಾರೆ. ಎಷ್ಟು ಹೊತ್ತಾದರೂ ಈಶ್ವರಪ್ಪ ವಾಪಾಸ್ ಆಗದಿದ್ದಾಗ ಕೇಂದ್ರ ನಾಯಕರು ಮನೆಯಿಂದ ಹಿಂದಿರುಗಿದ್ದಾರೆ.
ಬೆಳಿಗ್ಗೆಯಷ್ಟೇ ಮಾಜಿ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಹಲವು ರಾಜ್ಯನಾಕರು ಮನವೊಲಿಕೆಗೆ ಯತ್ನಿಸಿದ್ದರು. ಆದರೂ ಈಶ್ವರಪ್ಪನವರ ಬಂಡಾಯ ಶಮನವಾಗಿಲ್ಲ. ಈಗ ಕೇಂದ್ರ ನಾಯಕರು ಆಗಮಿಸಿದ್ದರೂ ಚರ್ಚೆಗೂ ಮೊದಲೇ ಈಶ್ವರಪ್ಪ ತಾವೇ ಮನೆಯಿಂದ ಹೊರ ಹೋಗಿದ್ದಾರೆ. ಈ ಮೂಲಕ ಈಶ್ವರಪ್ಪ ಮನವೊಲಿಕೆಗೆ ಕೇಂದ್ರ ನಾಯಕರು ವಿಫಲರಾಗಿದ್ದಾರೆ.