ಬೆಂಗಳೂರು: ಬೆಂಗಳೂರಿನ ಸುತ್ತಮುತ್ತಲ ನಗರಗಳಿಗೆ ಉಪನಗರ ರೈಲು ಯೋಜನೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯ ಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ಅನುಮತಿ ಕೋರಿ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.
ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉಪನಗರ ರೈಲು ಯೋಜನೆ ಪ್ರಗತಿ ಕುರಿತು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ(K-RIDE) ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆ ನಡೆಸಿದ ಸಚಿವರು ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿವಾರಣೆ ಗುರಿಯೊಂದಿಗೆ ಉಪನಗರ ರೈಲು ಯೋಜನೆ ಕೈ ಎತ್ತಿಕೊಂಡಿದ್ದು, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ಯೋಜನೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾದ್ಯತಾ ವರದಿ ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯ ಅನುಮತಿ ನೀಡಬೇಕೆಂದು ಕೋರಿ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಉಪನಗರ ರೈಲು ಯೋಜನೆ ಕಾಮಗಾರಿ ಹಂತ -1ರಲ್ಲಿ 148.17 ಕಿಲೋಮೀಟರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಕಾರಿಡಾರ್ ಗಳಿದ್ದು, ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ, ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ, ಕೆಂಗೇರಿಯಿಂದ ವೈಟ್ ಫೀಲ್ಡ್, ಹೀಳಲಿಗೆಯಿಂದ ರಾಜಾನಕುಂಟೆವರೆಗೆ ಇದೆ. ಹಂತ -2 ರಲ್ಲಿ ದೇವನಹಳ್ಳಿ – ಕೋಲಾರ, ಚಿಕ್ಕಬಾಣಾವರ- ದಾಬಸ್ ಪೇಟೆ – ತುಮಕೂರು, ಚಿಕ್ಕಬಾಣಾವರ- ಮಾಗಡಿ, ಕೆಂಗೇರಿ –ಮೈಸೂರು, ವೈಟ್ಫೀಲ್ಡ್ –ಬಂಗಾರಪೇಟೆ, ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು ಮತ್ತು ರಾಜಾನಕುಂಟೆಯಿಂದ ದೊಡ್ಡಬಳ್ಳಾಪುರದವರೆಗೆ ವಿಸ್ತರಿಸಲು ಯೋಜಿಸಲಾಗಿದೆ.