ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಅನೇಕ ಸಮಸ್ಯೆಗಳನ್ನು ಅವರ ಜೊತೆ ಚರ್ಚಿಸಿದ್ದು, ಬಹುತೇಕ ಸಮಸ್ಯೆಗಳ ಸ್ಪಂದಿಸಿ ಈಡೇರಿಸುವ ಭರವಸೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಈ ಬಾರಿ ಈಡೇರಿಸುವುದಾಗಿ ತಿಳಿಸಿದ್ದು, ಇದಕ್ಕೆ ಬೇಕಾದ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಮೀಸಲಿರಿಸಿ ಬಜೆಟ್ ನಲ್ಲಿ ಘೋಷಿಸಿಲು ತೀರ್ಮಾನಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು, ಬ್ರಾಹ್ಮಣ ವರ್ಗಗಳು ಮತ್ತು ಏಜೆನ್ಸಿ ಮೂಲಕ ನೀಡಲಾಗಿರುವ ಜಾಹೀರಾತು ಮೊತ್ತಕ್ಕಾಗಿ 93 ಕೋಟಿ ರೂ.ಗಳನ್ನು ಇನ್ನು ಒಂದೆರಡು ದಿನದಲ್ಲಿ ವಾರ್ತಾಇಲಾಖೆಗೆ ನೀಡಲಾಗುವುದು. ಉದ್ದೇಶ ಪೂರಕವಾಗಿ ಜಾಹೀರಾತು ನೀಡಿಕೆಯಲ್ಲಿ ವಿಳಂಬ ಧೋರಣೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು. ಜಾಹೀರಾತು ದರ ಪರಿಷ್ಕರಣೆಯನ್ನೂ ಸದ್ಯದಲ್ಲಿಯೇ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, KUWJ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮತ್ತು ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಚೆಲುವರಾಜು ಇದ್ದರು.