ಬಿಜೆಪಿಗೆ ಗುಡ್ ಬೈ ಹೇಳಿದ ಮಾಜಿ ಸಚಿವ ಎ. ಮಂಜು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ನಂತರ ಬಿಜೆಪಿಯಿಂದ ಎ. ಮಂಜು ಅಂತರ ಕಾಯ್ದುಕೊಂಡಿದ್ದರು.
ಅವರು ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಲಾಬಿ ಮಾಡಿದ್ದರು. ಈಗ ಅಚ್ಚರಿ ಎನ್ನುವಂತೆ ಜೆಡಿಎಸ್ ಸೇರ್ಪಡೆಯಾಗಿ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ದೇವೇಗೌಡರ ಕುಟುಂಬದ ವಿರುದ್ಧವೇ ಮಂಜು ರಾಜಕಾರಣ ಮಾಡಿಕೊಂಡು ಬಂದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬದ್ಧವೈರಿಗಳ ಜೊತೆಗೆ ಸೇರ್ಪಡೆಯಾಗಿದ್ದಾರೆ. ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ ಸೆಡ್ಡು ಹೊಡೆಯಲು ಎ. ಮಂಜು ಅವರಿಗೆ ಜೆಡಿಎಸ್ ಗಾಳ ಹಾಕಿದೆ.
ಕಳೆದ ಒಂದು ವರ್ಷದಿಂದ ಎ.ಟಿ. ರಾಮಸ್ವಾಮಿ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಮಾಜಿ ಸಚಿವ ಎ. ಮಂಜು ಅವರನ್ನು ದಳಪತಿಗಳು ಜೆಡಿಎಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದಾರೆ.
ಇಂದು ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಮ್ಮುಖದಲ್ಲಿ ಎ. ಮಂಜು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.