ಶಿವಮೊಗ್ಗ: ಜೋಗ ಜಲಪಾತಗಳಲ್ಲಿ ಜಲಧಾರೆಗಳ ಅಬ್ಬರ ಇಲ್ಲವಾಗಿದ್ದರೂ ಹೊಸ ವರ್ಷ ಸ್ವಾಗತಿಸಲು ಮತ್ತು ವರ್ಷಾಂತ್ಯದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ.
ವಾರಾಂತ್ಯದ ದಿನವಾದ ಶನಿವಾರ ಮತ್ತು ಭಾನುವಾರ ಜಲಪಾತ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಶೈಕ್ಷಣಿಕ ಪ್ರವಾಸ ಡಿಸೆಂಬರ್ ಮತ್ತು ಜನವರಿವರೆಗೂ ಇರುವುದರಿಂದ ವಿವಿಧೆಡೆಯಿಂದ ಶಾಲಾ ಮಕ್ಕಳು, ಶಿಕ್ಷಕರು ಆಗಮಿಸಿ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದರಿಂದಾಗಿ ಜೋಗ ಸುತ್ತಮುತ್ತಲಿನ ದೇಶಗಳಲ್ಲಿನ ಹೋಂ ಸ್ಟೇ, ಲಾಡ್ಜ್, ಹೋಟೆಲ್, ಅತಿಥಿ ಗೃಹಗಳು ಭರ್ತಿಯಾಗಿವೆ. ಹೋಟೆಲ್, ಅಂಗಡಿಯವರಿಗೆ ಭರ್ಜರಿ ವ್ಯಾಪಾರ ವಹಿವಾಟು ಆಗುತ್ತಿದೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹೊತ್ತಿನಲ್ಲಿ ಜನವರಿ 1ರಿಂದ ಮಾರ್ಚ್ 15 ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಜೋಗ ಜಲಪಾತದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಜಲಪಾತ ವೀಕ್ಷಿಸಲು ತೆರಳುವ ಮುಖ್ಯ ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಜನವರಿ 1ರಿಂದ ಮಾರ್ಚ್ 15 ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಹೊರತುಪಡಿಸಿ ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ರಸ್ತೆಯ ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗ್ಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರೆ ಸ್ಥಳಗಳಿಂದ ಪ್ರವಾಸಿಗರು ಜಲಪಾತ ವೀಕ್ಷಿಸಬಹುದಾಗಿದೆ. ಮುಖ್ಯ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಲ್ಲಿ ತಡೆ ಬೇಲಿ ನಿರ್ಮಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ನೇಮಿಸಿ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.