
ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೆಲ ಜೆಡಿಎಸ್ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಮೈತ್ರಿ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್, ನಮ್ಮ ಪಕ್ಷದ ವರಿಷ್ಠರು ನನಗೆ ಬಿಜೆಪಿ ಜೊತೆ ಮೈತ್ರಿಗೆ ಹೇಳಿಲ್ಲ. ನನ್ನ ಕ್ಷೇತ್ರದಲ್ಲಿ ಮೈತ್ರ್ರಿ ಸಾಧ್ಯವಿಲ್ಲ. ದೇವದುರ್ಗದಲ್ಲಿ ಬಿಜೆಪಿ ನಾಯಕರು ನನಗೆ ಹಾಗೂ ನನ್ನ ಮಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸತತವಾಗಿ ತೊಂದರೆ ಕೊಟ್ಟಿದ್ದಾರೆ. ಅಂತವರ ಜೊತೆ ಮೈತ್ರಿ ಮಾತಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಪಂಚರತ್ನ ಯಾತ್ರೆ ವಾಹನದ ಮೇಲೆ ಕಲ್ಲುತೂರಾಟ ನಡೆಸಿದರು. ನನ್ನ ಬ್ಯಾನರ್ ಗಳನ್ನು ಹರಿದು ಹಾಕಿದರು. ಇದೆಲ್ಲವನ್ನು ಮಾಡಿದ್ದು ಬಿಜೆಪಿಯವರೇ. ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿಯವರು ಚಪ್ಪಲಿಯಿಂದ ಹೊಡೆಯುವುದಾಗಿ ಹೇಳಿದರು. ದೇವದುರ್ಗದಲ್ಲಿ ಬಿಜೆಪಿಯವರು ಏನೇನೋ ಕಷ್ಟಗಳನ್ನು ಕೊಟ್ಟಿದ್ದಾರೆ. ಹೀಗಿರುವಾಗ ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ. ಜನರ ತೀರ್ಮಾನವೇ ನನ್ನ ತೀರ್ಮಾನ ಎಂದಿದ್ದಾರೆ.
ನನ್ನ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ವರಿಷ್ಠರು ನನಗೆ ಹೇಳಿಲ್ಲ. ನನ್ನ ಕಷ್ಟ ಏನು ಅಂತ ವರಿಷ್ಠರಿಗೆ ಗೊತ್ತು. ದೇವೇಗೌಡರು ನನ್ನನ್ನು ಮಗಳ ಸಮಾನವಾಗಿ ನೋಡೊದ್ದಾರೆ. ನನಗೆ ಕಷ್ಟವಾದಾಗ ಅವರೂ ಸಹ ನೋವು ಅನುಭವಿಸಿದ್ದಾರೆ. ನನ್ನ ಪಕ್ಷ ನನಗೆ ಯಾವತ್ತೂ ಟಾರ್ಗೆಟ್ ಮಾಡಲ್ಲ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣನಿಗೆ ಚಾಲೇಂಜ್ ಮಾಡಿ ಕೆಟ್ಟದಾಗಿ ನಿಂದಿಸಿದ ವ್ಯಕ್ತಿ ಇಲ್ಲಿದ್ದಾನೆ. ನನಗೆ ಬೈದರೆ ಸಹಿಸಿಕೊಳ್ಳುವೆ. ದೇವೇಗೌಡರ ಕುಟುಂಬಕ್ಕೆ ಬೈದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಮಾಡಿಕೊಳ್ಳಬೇಕಾ? ಕುಮಾರಣ್ಣನ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಜನ ಅವರನ್ನು ಸೋಲಿಸಿ ನನ್ನ ಗೆಲ್ಲಿಸಿದ್ದಾರೆ. ಇದೆಲ್ಲವನ್ನು ಮಾತನಾಡಲು ನನಗೆ ನೋವಾಗುತ್ತೆ. ಜನರ ಭಾವನಾತ್ಮಕ ಸಂಬಂಧಕ್ಕೆ ಧಕ್ಕೆ ತರಲ್ಲ. ಆ ವ್ಯಕ್ತಿಯಿಂದ ನನಗೂ, ಪಕ್ಷಕ್ಕೂ ಧಕ್ಕೆಯಾಗಿದೆ. ನಮ್ಮ ಕುಟುಂಬದ ಮೇಲೆ ಹಲ್ಲೆಯೂ ಆಗಿದೆ. ಇದೆಲ್ಲವನ್ನೂ ಮರೆಯಲು ಸಾಧ್ಯವೇ ಇಲ್ಲ. ನನ್ನ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ರಾಷ್ಟ್ರಿಯ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ಕ್ಷೇತ್ರದ ಜನರ ಮನಸ್ಸಿಗೆ ನೋವಾಗುವಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಶಾಸಕಿ ಕರೆಮ್ಮ ತಿಳಿಸಿದ್ದಾರೆ.