ಬೆಂಗಳೂರು: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಗೆ ಮತ್ತೊಂದು ಆಘಾತ ಎದುರಾಗಿದೆ. ಮೈತ್ರಿ ಬಳಿಕ ಅಲ್ಪಸಂಖ್ಯಾತ ಸಮುದಾಯದ ಹಲವು ಮುಖಂಡರು ಜೆಡಿಎಸ್ ನಿಂದ ದೂರವಾದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ.
ಈ ಕುರಿತು ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಜತೆ ಮೈತ್ರಿ ನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಬಗ್ಗೆ ಮುಸ್ಲಿಂ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಇಬ್ರಾಹಿಂ ಅವರಿಗೂ ಮೈತ್ರಿಯ ಬಗ್ಗೆ ಮಾಹಿತಿ ಇದೆ. ಮೈತ್ರಿಯ ಯಾವ ವಿಷಯಗಳು ನಾವು ಮುಚ್ಚಿಟ್ಟಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷ ಎನ್.ಡಿ.ಎ. ಭಾಗವಾದರೂ ಮುಸ್ಲಿಮರು ಸೇರಿದಂತೆ ಎಲ್ಲಾ ಸಮುದಾಯಗಳ ಹಿತಾಸಕ್ತಿಗೆ ಬದ್ಧವಾಗಿರುತ್ತದೆ. ನಮ್ಮ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ನಾಯಕರ ಅಭಿಪ್ರಾಯ ಪಡೆದುಕೊಂಡ ನಂತರವೇ ಮೈತ್ರಿ ನಿರ್ಧಾರಕ್ಕೆ ಬಂದಿದ್ದೇವೆ. ರಾಜಕೀಯ ಬೆಳವಣಿಗೆ ಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಇದು ಅವಕಾಶವಾದಿ ರಾಜಕಾರಣ ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.