ಬೆಂಗಳೂರು: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.
ಜನಾರ್ದನ ರೆಡ್ಡಿಯ 219 ಆಸ್ತಿಗಳನ್ನು ಹೊಸದಾಗಿ ಪತ್ತೆ ಮಾಡಿದ್ದೇವೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅವರ ಆಸ್ತಿ ಪತ್ತೆ ಹಚ್ಚಿದ್ದೇವೆ. ಅವೆಲ್ಲ ಅಕ್ರಮ ಹಣದ ಮೂಲದಿಂದ ಖರೀದಿಸಿದ ಆಸ್ತಿ ಎಂದು ಆರೋಪಿಸಲಾಗಿದೆ.
ಆಸ್ತಿ ಜಪ್ತಿಗೆ ಅನುಮತಿ ಕೋರಿ ಕರ್ನಾಟಕ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿದೆ. 2022ರ ಆಗಸ್ಟ್ 30ರಂದೇ ಅರ್ಜಿ ಸಲ್ಲಿಸಿದರೂ ಸರ್ಕಾರ ಅನುಮತಿ ನೀಡಿಲ್ಲ. ಈ ವಿಚಾರ ತಿಳಿದ ಜನಾರ್ದನ ರೆಡ್ಡಿ ಆಸ್ತಿ ಮಾರಾಟ ಮಾಡುತ್ತಿದ್ದಾರೆ. ಕರ್ನೂಲ್ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ಇರುವ ಆಸ್ತಿ ಮಾರಾಟಕ್ಕೆ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಿಬಿಐ ಮನವಿ ಮಾಡಿದೆ.
ಜನಾರ್ದನ ರೆಡ್ಡಿ ಮಾಲೀಕತ್ವದ ಮೆ. ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದಾಗಿ ಆರೋಪಿಸಲಾಗಿತ್ತು. 65 ಕೋಟಿ ರೂ. ಮೌಲ್ಯದ ಆಸ್ತಿ ಜಪ್ಪಿಗೆ ಸಿಬಿಐನಿಂದ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.