ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನವೂ ಗದ್ದಲ-ಕೋಲಾಹಲ ಮುಂದುವರೆದಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮರುಸ್ಥಾಪಿಸಲು ಒತ್ತಯಿಸಿ ಅಂಗೀಕರಿಸಿದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಶಾಸಕರು ಮೂರನೇ ದಿನವಾದ ಇಂದೂ ಸದನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಲಾಪದ ವೇಳೆ ಗದ್ದ-ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ ಸ್ಪೀಕರ್ ಸೂಚನೆ ಮೇರೆಗೆ ವಿರೋಧ ಪಕ್ಷದ 12 ಸದಸ್ಯರು ಹಾಗೂ ಅವಾಮಿ ಇತೆಹಾರ್ ಪಕ್ಷದ ಶಾಸಕ ಶೇಖ್ ಖುರ್ಷಿದ್ ಅವರನ್ನು ಮಾರ್ಷಲ್ ಗಳು ಸದನದಿಂದ ಹೊರ ಹಾಕಿದ ಪ್ರಸಂಗ ನಡೆದಿದೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪಾಕಿಸ್ತಾನ ಅಜೆಂಡಾ ನಡೆಯಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾರಂಭಿಸಿದರು. ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರನ್ನು ಸದನದಿಂದ ಹೊರ ಕಳುಹಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ವಿಪಕ್ಷಗಳ 13 ಸದಸ್ಯರನ್ನು ಸದನದಿಂದ ಹೊರ ಕಳುಹಿಸಲಾಯಿತು. ಸದನದಲ್ಲಿ ಗದ್ದಲ ಹಿನ್ನೆಲೆಯಲ್ಲಿ ಬಳಿಕ ಕಲಾಪ ಕೆಲ ಕಾಲ ಮುಂದೂಡಲಾಯಿತು.