ಇರಾನ್‌ನ ದಕ್ಷಿಣ ಖೊರಾಸನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಭಾನುವಾರ ತಿಳಿಸಿದೆ.
ಮದಂಜೂ ಕಂಪನಿಯು ನಡೆಸುತ್ತಿರುವ ಗಣಿಯಲ್ಲಿರುವ ಬಿ ಮತ್ತು ಸಿ ಎರಡು ಬ್ಲಾಕ್‌ಗಳಲ್ಲಿ ಮೀಥೇನ್ ಅನಿಲ ಸ್ಫೋಟದಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದೆ.
ದೇಶದ ಕಲ್ಲಿದ್ದಲಿನ 76% ಈ ಪ್ರದೇಶದಿಂದ ಒದಗಿಸಲಾಗಿದೆ. ಮದಂಜೂ ಕಂಪನಿ ಸೇರಿದಂತೆ ಸುಮಾರು 8 ರಿಂದ 10 ದೊಡ್ಡ ಕಂಪನಿಗಳು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿವೆ ಎಂದು ದಕ್ಷಿಣ ಖೊರಾಸನ್ ಪ್ರಾಂತ್ಯದ ಗವರ್ನರ್ ಅಲಿ ಅಕ್ಬರ್ ರಹೀಮಿ ತಿಳಿಸಿದ್ದಾರೆ.
ಬಿ ಬ್ಲಾಕ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಬ್ಲಾಕ್‌ನಲ್ಲಿದ್ದ 47 ಕಾರ್ಮಿಕರಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ರಹೀಮಿ ಹೇಳಿದ್ದಾರೆ.
ಇರಾನ್‌ನ ಹೊಸ ಸುಧಾರಣಾವಾದಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಗಾಗಿ ನ್ಯೂಯಾರ್ಕ್‌ಗೆ ಪ್ರಯಾಣಿಸಲು ತಯಾರಿ ನಡೆಸುತ್ತಿದ್ದಾರೆ. ಸಿಕ್ಕಿಬಿದ್ದವರನ್ನು ರಕ್ಷಿಸಲು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಆದೇಶಿಸಿದ್ದಾರೆ.
ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ನಾನು ಮಂತ್ರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಪೆಜೆಶ್ಕಿಯಾನ್ ತಿಳಿಸಿದ್ದಾರೆ.
ತೈಲ ಉತ್ಪಾದಿಸುವ ಇರಾನ್ ಕೂಡ ವಿವಿಧ ಖನಿಜಗಳಿಂದ ಸಮೃದ್ಧವಾಗಿದೆ. ಇರಾನ್ ವಾರ್ಷಿಕವಾಗಿ ಸುಮಾರು 3.5 ಮಿಲಿಯನ್ ಟನ್ ಕಲ್ಲಿದ್ದಲನ್ನು ಬಳಸುತ್ತದೆ. ಆದರೆ, ವರ್ಷಕ್ಕೆ ಅದರ ಗಣಿಗಳಿಂದ ಕೇವಲ 1.8 ಮಿಲಿಯನ್ ಟನ್ ಗಳಷ್ಟು ಮಾತ್ರ ಹೊರತೆಗೆಯುತ್ತದೆ. ಉಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.