ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ಗಳ ಜಯ ಸಾಧಿಸಿದೆ. 11 ಪಂದ್ಯಗಳಲ್ಲಿ ನಾಲ್ಕನೇ ಜಯ ದಾಖಲಿಸಿದ ಆರ್.ಸಿ.ಬಿ. 7ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 19.1 ಓವರ್ ಗಳಲ್ಲಿ 147 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ವಿರಾಟ್ ಕೊಹ್ಲಿ 42, ಫಾಫ್ ಡು ಪ್ಲೇಸಿಸ್ 64 ರನ್ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪವರ್ ಪ್ಲೇನಲ್ಲಿ ಬರೋಬ್ಬರಿ 92 ರನ್ ಗಳಿಸಿದ್ದು, ಐಪಿಎಲ್ ನಲ್ಲಿಯೇ ತಂಡದ ಗರಿಷ್ಠ ಪವರ್ ಪ್ಲೇ ಸ್ಕೋರ್ ಇದಾಗಿದೆ.
ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡಿದ್ದ ಆರ್‌ಸಿಬಿ ಈಗ ಭರ್ಜರಿ ಕಂಬ್ಯಾಕ್ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್.ಸಿ.ಬಿ. 7ನೇ ಸ್ಥಾನಕ್ಕೆ ಭರ್ಜರಿ ಜಿಗಿತ ಕಂಡಿದೆ. ಆರ್.ಸಿ.ಬಿ. ಪ್ಲೇ ಆಫ್ ಲೆಕ್ಕಾಚಾರ ಮತ್ತಷ್ಟು ರೋಚಕತೆ ಹುಟ್ಟು ಹಾಕಿದೆ. ಇನ್ನುಳಿದ ಮೂರು ಪಂದ್ಯಗಳನ್ನು ಗೆದ್ದರೆ 14 ಅಂಕ ಆಗಲಿದ್ದು ಇತರೆ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಆರ್.ಸಿ.ಬಿ.ಗೆ ಅವಕಾಶ ಸಿಗಲಿದೆ.