ಯುವತಿಯರನ್ನು ಪ್ರೇಮಪಾಶಕ್ಕೆ ಬೀಳಿಸಿ ಅವರನ್ನು ಬಲವಂತದ ಮತಾಂತರಕ್ಕೆ ಗುರಿ ಮಾಡುವ ಕಥಾ ಹಂದರದ ’ದಿ ಕೇರಳ ಸ್ಟೋರಿ’ ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡದಿರಲು ಕಾಂಗ್ರೆಸ್, ಸಿಪಿಐ(ಎಂ), ಹಾಗೂ ಐಯುಎಂಎಲ್ ಆಗ್ರಹಿಸಿವೆ.
ಸುದಿಪ್ತೋ ಸೆನ್ ನಿರ್ದೇಶನ ಹಾಗೂ ವಿಪುಲ್ ಅಮೃತಾಲ್ ಶಾ ನಿರ್ಮಾಣದ ’ದಿ ಕೇರಳ ಸ್ಟೋರಿ’ ಮೇ 5ರಂದು ಬಿಡುಗಡೆಯಾಗಲಿದೆ. ಇಸ್ಲಾಂಗೆ ಮತಾಂತರ ಹೊಂದುವ ನಾಲ್ವರು ಮಹಿಳೆಯರು ಹೇಗೆ ಐಸಿಸ್ ಸೇರುತ್ತಾರೆ ಎಂದು ಚಿತ್ರದಲ್ಲಿ ತೋರಲಾಗಿದೆ. ಕೇರಳದಲ್ಲಿ ಮತಾಂತರಗೊಂಡಿರುವ 32,000 ಮಹಿಳೆಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲಾಗಿದೆ ಎಂದು ಚಿತ್ರದಲ್ಲಿ ಹೇಳಲಾಗಿದೆ.
’ಇದು ಸಮಾಜವನ್ನು ಧೃವೀಕರಣಗೊಳಿಸಲು ಸಂಘ ಪರಿವಾರದ ಅಜೆಂಡಾ’ ಎಂದು ಆಗ್ರಹಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಪಕ್ಷ ನಾಯಕ ವಿ ಡಿ ಸತೀಶನ್, “ಈ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮಾತು ಬರುವುದಿಲ್ಲ. ಚಿತ್ರ ಏನು ಹೇಳಲು ಬಯಸುತ್ತದೆ ಎಂದು ಟ್ರೇಲರ್ ತೋರುತ್ತಿದೆ. ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇರಳಕ್ಕೆ ಅವಮಾನ ಮಾಡಿದಂತೆ. ಮತೀಯ ವೈಷಮ್ಯ ಬಿತ್ತಿಸಲು ಮಾಡುವ ಯತ್ನಗಳ ವಿರುದ್ಧ ಕೇರಳ ಒಗ್ಗಟ್ಟಾಗಿ ನಿಲ್ಲಲಿದೆ,” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಬಿಜೆಪಿ ಪರ ಕ್ರಿಶ್ಚಿಯನ್ ಸಮೂಹವಾದ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಗೂ ಅಲಾಯನ್ಸ್ ಫಾರ್ ಸೋಷಿಯಲ್ ಆಕ್ಷನ್ (ಕಾಸಾ)ಚಿತ್ರದ ಬೆಂಬಲಕ್ಕೆ ನಿಂತಿದೆ. ಕೇರಳದಲ್ಲಿ ಅನೇಕ ಕುಟುಂಬಗಳಲ್ಲಿ ’ಲವ್ ಜಿಹಾದ್’ ಅಲ್ಲೋಲಕಲ್ಲೋಲ ಸೃಷ್ಟಿಸಿದೆ ಎಂದಿರುವ ಕಾಸಾ, ಚಿತ್ರದ ವಿರುದ್ಧ ನಿಂತಿರುವ ಕಾಂಗ್ರೆಸ್ ಹಾಗೂ ಎಡರಂಗವನ್ನು ಟೀಕಿಸಿದೆ.