ಬೆಂಗಳೂರು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಸುವ ಕುರಿತಂತೆ ತಜ್ಞರೊಂದಿಗೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ 100 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದ 40 ಕೆರೆಗಳಿವೆ. ಇಂತಹ ಕೆರೆಗಳು 10 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿವೆ. ಈ ಕೆರೆಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ಶೇಕಡ 50 ರಿಂದ 60ರಷ್ಟು ನೀರು ತುಂಬಿಸಲಾಗುತ್ತದೆ. ಈ ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್ ಘಟಕ ಅಳವಡಿಸುವುದರಿಂದ 2500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಅವಕಾಶವಿದೆ ಎಂದು ಹೇಳಿದ್ದಾರೆ.