ಮರಳಿ ಒಂದಾಗಲು ಸಾಧ್ಯವೇ ಇಲ್ಲದ ದಂಪತಿಗಳಿಂದ ಎರಡೂ ಕುಟುಂಬಗಳಿಗೆ ಪದೇ ಪದೇ ನೋವುಗಳೇ ಆಗುತ್ತಿರುತ್ತವೆ ಎಂದಿರುವ ಸುಪ್ರೀಂ ಕೋರ್ಟ್, 25 ವರ್ಷಗಳಿಂದ ವಿರಸದಲ್ಲಿರುವ ದಂಪತಿಗಳಿಗೆ ವಿಚ್ಛೇದನ ನೀಡಿದೆ.
ಏಪ್ರಿಲ್ 26ರಂದು, ನ್ಯಾಯಾಧೀಶ ಸುಧಾಂಶು ಧೂಲಿಯಾ ಪತಿಯೊಬ್ಬರ ವಿಚ್ಛೇದನದ ಅರ್ಜಿಗೆ ಸಮ್ಮಿತಿ ಸೂಚಿಸಿದ್ದು, ’ಮರಳಿ ಸರಿಹೋಗಲು ಸಾಧ್ಯವೇ ಇಲ್ಲದ’ ಮದುವೆ ಸಂಬಂಧವೊಂದು, ’ಕ್ರೂರತೆ’ ಎಂದು ವ್ಯಾಖ್ಯಾನಿಸಬಹುದಾದ ಕಾರಣ, ಹಿಂದೂ ವಿವಾಹ ಕಾಯಿದೆಯ 13(1) (ia) ಅಡಿ ಮದುವೆಯನ್ನು ವಿಸರ್ಜಿಸಬಹುದಾಗಿದೆ ಎಂದಿದ್ದಾರೆ.
ಕೆಳ ಹಂತದ ನ್ಯಾಯಾಲಯವೊಂದು ವಿಚ್ಛೇದನ ನೀಡಿದ್ದ ತೀರ್ಪನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು 12 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಮತ್ತೆ ಕೆಳ ಹಂತದ ನ್ಯಾಯಾಲಯದ ತೀರ್ಪಿನತ್ತ ತಂದಿದೆ.
ಹೀಗೆ ಪರಸ್ಪರ ಬೆಸುಗೆಯೇ ಇಲ್ಲದೇ ಸುದೀರ್ಘಾವಧಿಗೆ ಮನಸ್ಸಿಲ್ಲದೇ ಜೊತೆಯಾಗಿರುವ ದಂಪತಿಗಳಿಗೆ ವಿಚ್ಛೇದನ ನೀಡಲು ಸುಪ್ರೀಂ ಕೋರ್ಟ್‌ನ ಈ ಆದೇಶ ಮುನ್ನುಡಿಯಾಗಲಿದೆ.
ಹಿಂದೂ ವಿವಾಹ ಕಾಯಿದೆ 13(1) (ia) ಅಡಿ ’ಕ್ರೌರ್ಯ’ವನ್ನು ವಿಚ್ಛೇದನ ನೀಡಲು ಕಾರಣವನ್ನಾಗಿ ವ್ಯಾಖ್ಯಾನಿಸಲಾಗಿದ್ದರೂ ಸಹ , ಹೀಗೆ ಬೆಸೆಯಲು ಸಾಧ್ಯವೇ ಇಲ್ಲದ ದಾಂಪತ್ಯದ ಬಗ್ಗೆ ಏನೂ ತಿಳಿಸಿಲ್ಲ. ಹೀಗಾಗಿ ಸಂವಿಧಾನದ 142ನೇ ವಿಧಿ ತನಗೆ ಕೊಡಮಾಡಿರುವ ವಿಶೇಷ ಅಧಿಕಾರಗಳನ್ನು ಬಳಸಿಕೊಂಡ ಸುಪ್ರೀಂ ಕೋರ್ಟ್ ಈ ದಂಪತಿಗಳಿಗೆ ವಿಚ್ಛೇದನ ಕರುಣಿಸಿದೆ.
ಇದೇ ವೇಳೆ, ಮೇಲ್ಕಂಡ ಕಾಯಿದೆಗೆ ಸೂಕ್ತ ತಿದ್ದುಪಡಿ ತಂದು, ಹೀಗೊಂದು ಕಾರಣಕ್ಕೆ ವಿಚ್ಛೇದನ ನೀಡಬಹುದಾದ ಸಾಧ್ಯತೆಯನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.