alex Certify ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ ದೇಶಗಳು ಮಾತ್ರವಲ್ಲ ಸುಡಾನ್, ನೈಜೀರಿಯಾ, ಕಾಂಗೋದಂತಹ ದೇಶಗಳಿಗಿಂತಲೂ ಭಾರತದ ಸ್ಥಿತಿ ಕೆಟ್ಟದಾಗಿರುವುದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿಶೇಷವಾಗಿ, 2018-22ರ ಅವಧಿಯಲ್ಲಿ ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆಯು ಜಗತ್ತಿನಲ್ಲಿಯೇ ಹೆಚ್ಚಿರುವುದು ಅತ್ಯಂತ ಆತಂಕಕಾರಿಯಾಗಿದೆ. ದುರಂತವೆಂದರೆ ತಮ್ಮನ್ನು ವಿಶ್ವಗುರು ಎಂದು ಬಿಂಬಿಸಿಕೊಳ್ಳುವಲ್ಲಿಯೇ ಸದಾಕಾಲ ವ್ಯಸ್ತರಾಗಿರುವ ಪ್ರಧಾನಿ ಮೋದಿಯವರು ತಮ್ಮ ಆಡಳಿತದ ವೈಫಲ್ಯವನ್ನು ಎತ್ತಿಹಿಡಿಯುವ ಇಂತಹ ವಿಷಯಗಳು ಪ್ರಸ್ತಾಪವಾದೊಡನೆಯೇ ಮಹಾಮೌನಿಯಾಗುತ್ತಾರೆ, ಜಾಣಕಿವುಡು, ಜಾಣಕುರುಡು ಪ್ರದರ್ಶಿಸುತ್ತಾರೆ.

ಜಾಗತಿಕ ಹಸಿವಿನ ಸೂಚ್ಯಂಕದ ವರದಿಯ ಪ್ರಕಾರ ಐದು ವರ್ಷಗಳೊಳಗಿನ ಮಕ್ಕಳ ಸಾವಿನ ಪ್ರಮಾಣವು ದೇಶದಲ್ಲಿ ಶೇ.3.1 ಇದೆ. ಅಲ್ಲದೆ, 15-24 ವರ್ಷದ ಯುವತಿಯರಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.58.1 ಇರುವುದು ತೀವ್ರ ವಿಷಾದ ಹುಟ್ಟಿಸುತ್ತದೆ. ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ, ಯುವತಿಯರಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೂಪಿಸಿರುವ ಯೋಜನೆಗಳು ಪರಿಣಾಮಕಾರಿಯಾಗಿಲ್ಲ ಎನ್ನುವುದನ್ನು ಈ ಅಂಕಿಅಂಶಗಳು ಒತ್ತಿ ಹೇಳುತ್ತಿವೆ. ಕೇಂದ್ರ ಸರ್ಕಾರದ ಯೋಜನೆಗಳು ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಿ, ಅನುಷ್ಠಾನದಲ್ಲಿ ಗಂಭೀರ ವೈಫಲ್ಯವನ್ನು ಕಾಣುತ್ತಿವೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಉತ್ತಮವಾಗಬೇಕೆಂದರೆ ದೇಶವು ಹಸಿವು ಮತ್ತು ಅಪೌಷ್ಟಿಕತೆ ಮುಕ್ತವಾಗಬೇಕಿದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿರುವ ಅಪೌಷ್ಟಿಕತೆ ದೂರಾಗಬೇಕಿದೆ. ವಿಪರ್ಯಾಸವೆಂದರೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಈ ವಿಚಾರದ ಗಂಭೀರತೆಯನ್ನು ಅರಿಯುತ್ತಿಲ್ಲ. ಪ್ರತಿ ಬಾರಿ ವರದಿ ಪ್ರಕಟವಾದಾಗಲೂ ಕೇಂದ್ರ ಸರ್ಕಾರ ವರದಿಯನ್ನು ಪ್ರಶ್ನಿಸುವ ಮೂಲಕ ತಮ್ಮ ವೈಫಲ್ಯ ಮರೆಮಾಚಲು ಹತಾಶ ಪ್ರಯತ್ನ ಮಾಡುತ್ತಾರೆ.

ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಪೋಲು ಮಾಡುತ್ತಿರುವ ಶ್ರಮ ಮತ್ತು ಸಂಪತ್ತನ್ನು ದೇಶವನ್ನು ಹಸಿವು ಮುಕ್ತಗೊಳಿಸಲು ಬಳಸಿದ್ದರೆ ವಿಶ್ವದ ಮುಂದೆ ಭಾರತ ತಲೆ ತಗ್ಗಿಸುವಂತಹ ಹೀನಾಯ ಪರಿಸ್ಥಿತಿ ಬರುತ್ತಿರಲಿಲ್ಲ.

ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟ, ಮಾತೃಪೂರ್ಣ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳನ್ನು ಜಾರಿಗೊಳಿಸಿರುವುದನ್ನು ಪ್ರಧಾನಿಯವರಿಗೆ ನೆನಪಿಸಬಯಸುತ್ತೇನೆ.

ನಮ್ಮ ಈ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ಮಾತ್ರ ಹಸಿವಿನ ವಿರುದ್ದ ನಿರ್ಣಾಯಕ ಹೋರಾಟ ನಡೆಸಲು ಸಾಧ್ಯ ಎನ್ನುವುದನ್ನು ಸನ್ಮಾನ್ಯ ನರೇಂದ್ರ ಮೋದಿಯವರು ಅರ್ಥಮಾಡಿಕೊಳ್ಳಬೇಕು.

ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಸತತವಾಗಿ ಕುಸಿಯುತ್ತಿದ್ದರೂ ಪ್ರಧಾನಿ ಮೋದಿಯವರು ಈ ವಿಚಾರವಾಗಿ ತಮ್ಮ ಸಂಪುಟ ಸಹೋದ್ಯೋಗಿಯಾದ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿಯವರನ್ನು ಪ್ರಶ್ನಿಸುತ್ತಿಲ್ಲ, ಅವರ ಸಾಧನೆ ಏನು ಎಂಬುದನ್ನು ವಿವರಿಸುತ್ತಿಲ್ಲ. ಕೇವಲ ಅಪಕ್ವ ರಾಜಕಾರಣದಲ್ಲೇ ವ್ಯಸ್ತರಾಗದಂತೆ ಅವರಿಗೆ ಕಿವಿಹಿಂಡಿ ಆಡಳಿತದೆಡೆಗೆ ಗಮನಹರಿಸಲು ಪ್ರಧಾನಿಯವರು ಇನ್ನಾದರೂ ಸೂಚಿಸಲಿ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...