ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7 ರಂದು ಇಸ್ರೇಲ್‌ಗೆ ನುಗ್ಗಿ ಇಸ್ರೇಲಿ ನಾಗರಿಕರನ್ನು ಕೊಂದ ನಂತರ ಗಾಜಾದ ಮೇಲೆ ಇಸ್ರೇಲ್‌ನ ಪ್ರತೀಕಾರ ಮತ್ತು ಪ್ರತಿದಾಳಿಯು ಗಾಜಾವನ್ನು ಯುದ್ಧ ವಲಯವಾಗಿ ಪರಿವರ್ತಿಸಿದೆ.
ಇಸ್ರೇಲ್, ಗಾಜಾದಲ್ಲಿನ ಹಮಾಸ್ ಉಗ್ರರ ಮೇಲೆ ನಿರಂತರ ದಾಳಿಯನ್ನು ಪ್ರಾರಂಭಿಸಿದೆ. ಈ ಯುದ್ಧವನ್ನು ವರದಿ ಮಾಡಲು ಭಾರತದ ಪತ್ರಕರ್ತರು ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪತ್ರಕರ್ತರು ಇಸ್ರೇಲ್ ನಲ್ಲಿದ್ದಾರೆ. ಪತ್ರಕರ್ತರು ಯುದ್ಧವನ್ನು ವರದಿ ಮಾಡುವಾಗ ತಮ್ಮ ಜೀವವನ್ನು ಪಣಕ್ಕಿಟ್ಟು ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದರೂ, ಕೆಲವೊಮ್ಮೆ ಅತಿಯಾದ ಉತ್ಸಾಹವು ಮುಜುಗರದ ಪರಿಸ್ಥಿತಿಗೆ ಕಾರಣವಾಗಬಹುದು.
ಭಾರತದ ಖಾಸಗಿ ಸುದ್ದಿವಾಹಿನಿ ಪತ್ರಕರ್ತರೊಬ್ಬರು ಹಮಾಸ್ ಉಗ್ರರ ಮೇಲೆ ಇಸ್ರೇಲ್ ಸೇನೆ ನಡೆಸ್ತಿರುವ ಕಾರ್ಯಾಚರಣೆಯನ್ನು ವರದಿ ಮಾಡುತ್ತಾ ಅತ್ಯಂತ ಏರು ಧ್ವನಿಯಲ್ಲಿ ವರದಿ ಮಾಡುತ್ತಿರುತ್ತಾರೆ.
ವರದಿಗಾರ ಸ್ವಲ್ಪ ಹೆಚ್ಚು ಉತ್ಸುಕನಾಗಿ ಏರು ಧ್ವನಿಯಲ್ಲಿ ವರದಿ ಮಾಡ್ತಿದ್ದಾಗ ಅವರ ಮುಂದೆಯೇ ಇದ್ದ ಇಸ್ರೇಲಿ ಸೈನಿಕರೊಬ್ಬರು, ವರದಿಗಾರನಿಗೆ ತನ್ನ ಧ್ವನಿಯನ್ನು ತಗ್ಗಿಸಿಕೊಳ್ಳುವಂತೆ ಸನ್ನೆ ಮಾಡಿ ಹೇಳುತ್ತಾರೆ.
ಇದನ್ನು ಗಮನಿಸಿದ ವರದಿಗಾರ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಪರಿಗಣಿಸಿ ತಕ್ಷಣವೇ ತನ್ನ ಧ್ವನಿಯನ್ನು ತಗ್ಗಿಸಿಕೊಳ್ಳುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಅಕ್ಟೋಬರ್ 7 ರಿಂದ ನಡೆಯುತ್ತಿರುವ ಯುದ್ಧದಲ್ಲಿ 1,300 ಕ್ಕೂ ಹೆಚ್ಚು ನಾಗರಿಕರನ್ನು ಇಸ್ರೇಲ್ ಕಳೆದುಕೊಂಡಿದ್ದರೆ, 1,500 ಪ್ಯಾಲೆಸ್ತೀನಿಯರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ.