ಪ್ಯಾಲೆಸ್ತೀನ್ ವಿರೋಧಿ ಪೋಸ್ಟ್ ಮಾಡಿದ ಕಾರಣಕ್ಕಾಗಿ ಬಹ್ರೇನ್‌ನ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ವೈದ್ಯರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ರಾಯಲ್ ಬಹ್ರೇನ್ ಆಸ್ಪತ್ರೆಯು ಡಾ. ಸುನೀಲ್ ರಾವ್ ಅವರನ್ನು ವಜಾಗೊಳಿಸಿದೆ. ನಮ್ಮ ಸಮಾಜದ ಬಗ್ಗೆ ಮಾಡಿದ ಆಕ್ಷೇಪಾರ್ಹ ಟ್ವೀಟ್‌ಗಳಿಂದಾಗಿ ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಹಮಾಸ್‌ನೊಂದಿಗಿನ ಮಾರಣಾಂತಿಕ ಸಂಘರ್ಷದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವ ಟ್ವೀಟ್‌ಗಳನ್ನು ಡಾ. ಸುನೀಲ್ ರಾವ್ ಪೋಸ್ಟ್ ಮಾಡಿದ್ದರು. ನಂತರ ಅವರ ಟ್ವೀಟ್‌ಗಳು ವೈರಲ್ ಆಗಿದ್ದು ಬಹ್ರೇನ್ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು.
ತಕ್ಷಣವೇ ರಾಯಲ್ ಬಹ್ರೇನ್ ಆಸ್ಪತ್ರೆಯು ಡಾ ಸುನಿಲ್ ರಾವ್ ಅವರನ್ನು ವಜಾಗೊಳಿಸಲು ನಿರ್ಧರಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಆಸ್ಪತ್ರೆಯು ಕಾನೂನು ಕ್ರಮಗಳನ್ನು ಕೈಗೊಂಡು ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದೆ.
“ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ ಸುನೀಲ್ ರಾವ್, ಆಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರ ಟ್ವೀಟ್‌ಗಳು ಮತ್ತು ಸಿದ್ಧಾಂತಗಳು ವೈಯಕ್ತಿಕ ಅಭಿಪ್ರಾಯವಾಗಿವೆ. ಅವರ ಪೋಸ್ಟ್ ಆಸ್ಪತ್ರೆಯ ಅಭಿಪ್ರಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಾವು ಖಚಿತಪಡಿಸಲು ಬಯಸುತ್ತೇವೆ. ಇದು ನಮ್ಮ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಮತ್ತು ನಾವು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದು ಅವರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಲಾಗಿದೆ” ಎಂದು ತಿಳಿಸಿದೆ.
ಆಸ್ಪತ್ರೆಯು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡುವ ಮೊದಲು ಡಾ. ಸುನಿಲ್ ರಾವ್ ಅವರು ತಮ್ಮ ಪೋಸ್ಟ್ ಬಗ್ಗೆ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದರು.
“ನಾನು ಈ ಪೋಸ್ಟ್ ಮಾಡಿದ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ಘಟನೆಯ ಸಂದರ್ಭದಲ್ಲಿ ಇದು ಸಂವೇದನಾಶೀಲವಾಗಿದೆ. ವೈದ್ಯರಾಗಿ ಎಲ್ಲಾ ಜೀವಗಳು ಮುಖ್ಯವಾಗಿವೆ. ನಾನು ಕಳೆದ 10 ವರ್ಷಗಳಿಂದ ಇಲ್ಲಿದ್ದು, ಈ ದೇಶವನ್ನು , ಇಲ್ಲಿನ ಜನರನ್ನು ಮತ್ತು ಅವರ ಧರ್ಮವನ್ನು ಆಳವಾಗಿ ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.
ಡಾ. ಸುನಿಲ್ ಕುಮಾರ್ ಅವರು ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅಲ್ಲಿ ಅವರು ತಮ್ಮ MBBS ಪದವಿಯನ್ನು ಪಡೆದಿದ್ದು, ಕರ್ನಾಟಕದ ಮಂಗಳೂರಿನಲ್ಲಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಡಿಯನ್ನು ಪೂರ್ಣಗೊಳಿಸಿದ್ದಾರೆ.