ಕೇಂದ್ರ ಗೃಹಸಚಿವ ಅಮಿತ್ ಶಾ ಶುಕ್ರವಾರದಂದು ಪಿಹೆಚ್ಡಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ 118ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ಭಾರತದ ಯಶಸ್ಸಿನ ಮೈಲುಗಲ್ಲುಗಳ ಬಗ್ಗೆ ವಿವರಿಸಿದ್ದಾರೆ.
ಈ ಸಾಧನೆಗಳಲ್ಲಿ ಜಿ 20 ಶೃಂಗಸಭೆ ಅಧ್ಯಕ್ಷತೆ, ಚಂದ್ರಯಾನ 3ರ ಅಡಿಯಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡಿಂಗ್ ಹಾಗೂ ಮಹಿಳಾ ಮೀಸಲಾತಿ ಅಂಗೀಕಾರದ ಬಗ್ಗೆ ಅವರು ಮಾತನಾಡಿದ್ದಾರೆ.
ಭಾರತವು ಪರಿವರ್ತನೆಯ ಹಂತದಲ್ಲಿದೆ. 2047ರಲ್ಲಿ ಭಾರತದ 100ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಗಣ್ಯ ರಾಷ್ಟ್ರವಾಗಿ ಬದಲಾಗಲಿದೆ ಎಂದು ಪ್ರಧಾನಿ ಮೋದಿ ಅಂದಾಜಿಸಿದ್ದಾರೆ. ಈ ಅವಧಿಯು ಭಾರತದ ಪಾಲಿಗೆ ಅಮೃತ ಕಾಲವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೆಚ್ಚುತ್ತಿರುವ ಯುವಶಕ್ತಿ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಂಖ್ಯೆಯ ವೃತ್ತಿಪರರು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದೊಂದಿಗೆ ಖಂಡಿತವಾಗಿಯೂ ಭಾರತವು ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಾಮುಖ್ಯತೆಯ ಬಗ್ಗೆಯೂ ಅಮಿತ್ ಶಾ ಮಾತನಾಡಿದ್ದಾರೆ.
ಕಳೆದ 9 ವರ್ಷಗಳ ಬಿಜೆಪಿ ನೇತೃತ್ವದ ಸರ್ಕಾರ ಮಾಡಿರುವ ಪ್ರಗತಿಯನ್ನು ಕೇಂದ್ರ ಸಚಿವ ಅಮಿತ್ ಶಾ ವಿವರಿಸಿದ್ದಾರೆ. ಭಾರತವು 2014ರಿಂದ ವಿಶ್ವದ ಅತಿ ದೊಡ್ಡ ಆರ್ಥಿಕತೆಗಳಲ್ಲಿ 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಜಿಗಿದಿದೆ. ಭಾರತವು ಯುನಿಕಾರ್ನ್ ಸ್ಟಾರ್ಟಪ್, ಡಿಜಿಟಲ್ ವಹಿವಾಟುಗಳು ಹಾಗೂ ಬಂಡವಾಳ ವೆಚ್ಚದಲ್ಲಿ ಗಣನೀಯ ಬೆಳವಣಿಗೆ ಕಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.