ಸೂರತ್: ‘ನನ್ನ ಮೂರನೇ ಅವಧಿಯಲ್ಲಿ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಗುಜರಾತ್ ನ ಸೂರತ್‌ನಲ್ಲಿ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾದ ಸೂರತ್ ಡೈಮಂಡ್ ಬೋರ್ಸ್ ಉದ್ಘಾಟಿಸಿ ಅವರು ಮಾತನಾಡಿ, ತಮ್ಮ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಹೇಳಿದ್ದಾರೆ.
ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ನಾನು ರಾಷ್ಟ್ರಕ್ಕೆ ಈ ಭರವಸೆ ನೀಡಿದ್ದೇನೆ. ಮುಂಬರುವ 25 ವರ್ಷಗಳ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ಅವರು ಹೇಳಿದರು.
ಸೂರತ್ ಡೈಮಂಡ್ ಬೋರ್ಸ್ ಭಾರತೀಯ ವಿನ್ಯಾಸಕರು, ಭಾರತೀಯ ವಸ್ತುಗಳು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಹೊಸ ಶಕ್ತಿ ಮತ್ತು ಹೊಸ ಸಂಕಲ್ಪದ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಸೂರತ್ ಡೈಮಂಡ್ ಬೋರ್ಸ್ ಕಟ್ಟಡವು 67 ಲಕ್ಷ ಚದರ ಅಡಿಗಳಷ್ಟು ಮಹಡಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದೆ. ಇದು ಖಾಜೋಡ್ ಗ್ರಾಮದಲ್ಲಿದೆ. ಕಟ್ಟಡವು ಒರಟು ಮತ್ತು ಪಾಲಿಶ್ ಮಾಡಿದ ವಜ್ರಗಳ ವ್ಯಾಪಾರದ ಜಾಗತಿಕ ಕೇಂದ್ರವಾಗಿದೆ.