ನವದೆಹಲಿ: ಭೂತಾನ್ ನಿಂದ ಕನಿಷ್ಠ ಆಮದು ಬೆಲೆ(MIP) ಷರತ್ತು ಇಲ್ಲದೆ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್ರಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
2022ರ ಸೆಪ್ಟೆಂಬರ್ ನಲ್ಲಿ ಪ್ರತಿ ವರ್ಷ ಭೂತಾನ್ ನಿಂದ ಕನಿಷ್ಠ ಆಮದು ಬೆಲೆ ಇಲ್ಲದೆ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು.
ಕೇಂದ್ರ ಸರ್ಕಾರ 2017ರಲ್ಲಿ ಪ್ರತಿ ಕೆಜಿ ಅಡಿಕೆಗೆ 251 ರೂ. ಕನಿಷ್ಠ ಆಮದು ಬೆಲೆ ನಿಗದಿಪಡಿಸಿದ್ದು, ಕಳೆದ ವರ್ಷ ಈ ದರವನ್ನು ಕೆಜಿಗೆ 351 ರೂಪಾಯಿಗೆ ಹೆಚ್ಚಳ ಮಾಡಿದೆ. ದೇಶದ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿಕೊಂಡರೂ ಈ ಬೆಲೆಗಿಂತ ಕಡಿಮೆ ದರಕ್ಕೆ ಆಮದು ಮಾಡಿಕೊಳ್ಳಬಾರದು ಎಂದು ಹೇಳಲಾಗಿದೆ.
ಭೂತಾನ್ ನಿಂದ ಆಮದು ಮಾಡಿಕೊಳ್ಳುವ ಅಡಿಕೆ ಪ್ರಮಾಣ ದೇಶಿಯ ಅಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ವರ್ತಕರು ಇದರ ಲಾಭ ಪಡೆದು ಸ್ಥಳೀಯವಾಗಿ ಬೆಲೆ ಕಡಿಮೆ ಮಾಡುವ ಆತಂಕ ಬೆಳೆಗಾರರಲ್ಲಿದೆ. ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು ರೈತರಿಗೆ ಬೆಳೆಗೆ ತಕ್ಕ ನ್ಯಾಯಯುತ ಬೆಲೆ ಕೊಡಿಸಬೇಕೆಂಬುದು ರೈತರ ಒತ್ತಾಯವಾಗಿದೆ. ಕಳೆದ ವರ್ಷ ಭೂತಾನ್ ಅಡಿಕೆ ಭಾರತಕ್ಕೆ ಬಂದಾಗ ಕ್ವಿಂಟಾಲ್ ಅಡಿಕೆ ದರ 4 ಸಾವಿರ ರೂಪಾಯಿವರೆಗೆ ಕುಸಿದಿತ್ತು. ಈಗ ಮತ್ತೆ ದರ ಕುಸಿತದ ಆತಂಕ ಎದುರಾಗಿದೆ.
ಭೂತಾನ್‌ನಿಂದ ಕನಿಷ್ಠ ಆಮದು ದರವಿಲ್ಲದೆ ಹಸಿರು ಅಡಿಕೆ ಆಮದು ಮಾಡಿಕೊಳ್ಳಲು ಭಾರತವು ಹತಿಸರ್(ಒಡಿಶಾ) ಮತ್ತು ದರ್ರಂಗ(ಅಸ್ಸಾಂ) ನ ಭೂ ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕ(LCS) ಸಹ ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(DGFT) ಅಧಿಸೂಚನೆಯಲ್ಲಿ ತಿಳಿಸಿದೆ.