ನವದೆಹಲಿ: ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಸ್ಕ್ರೂಡ್ರೈವರ್ ರೀತಿಯ ವಸ್ತುವಿನಿಂದ 26 ವರ್ಷದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಮೂಳೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಕುತ್ತಿಗೆ, ಹೊಟ್ಟೆ ಮತ್ತು ಬೆರಳುಗಳಿಗೆ ಗಾಯಗಳಾಗಿವೆ.
ಸೋಮವಾರ ರೋಗಿಯು ಸಹಾಯಕ್ಕಾಗಿ ಕೇಳಿದಾಗ ವೈದ್ಯರು ಕೆಲಸದ ಮಧ್ಯದಲ್ಲಿದ್ದರು. ತನ್ನ ತೋಳಿನಿಂದ ಕ್ಯಾನುಲಾವನ್ನು ತೆಗೆಯಲು ನರ್ಸ್‌ಗೆ ಹೇಳುವಂತೆ ವೈದ್ಯರು ಹೇಳಿದಾಗ ರೋಗಿಯು ಕೆರಳಿ ಕೃತ್ಯವೆಸಗಿದ್ದಾನೆ.
ರೋಗಿಯು ದಾಳಿ ಮಾಡಿದಾಗ ವೈದ್ಯರು ತುರ್ತು ವಿಭಾಗದಲ್ಲಿದ್ದರು. ಸಹೋದ್ಯೋಗಿಗಳ ಮಧ್ಯಪ್ರವೇಶದಿಂದ ವೈದ್ಯರು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ರೋಗಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವೈದ್ಯರ ದೂರಿನ ಮೇರೆಗೆ ಸಫ್ದರ್‌ಗಂಜ್ ಎನ್‌ಕ್ಲೇವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.