ನವದೆಹಲಿ: 28 ವರ್ಷದ ನಂತರ ಫೆಬ್ರವರಿ 18 ರಿಂದ ಭಾರತದಲ್ಲಿ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆ ನಡೆಯಲಿದೆ. 1996ರಲ್ಲಿ ಭಾರತದಲ್ಲಿ ಸ್ಪರ್ಧೆ ನಡೆದಿತ್ತು. ಅದಾಗಿ 28 ವರ್ಷಗಳ ಬಳಿಕ ಮತ್ತೆ ಭಾರತದಲ್ಲಿ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆ ಆಯೋಜನೆಗೊಂಡಿದೆ.
ಫೆ.18 ರಿಂದ ಸ್ಪರ್ಧೆ ಆರಂಭವಾಗಿ ಮೂರು ವಾರಗಳು ನಡೆಯಲಿದೆ. ಮಾರ್ಚ್ 9 ರಂದು ಮುಂಬೈನಲ್ಲಿ ಮುಕ್ತಾಯವಾಗಲಿದೆ. 120 ದೇಶಗಳ ಪ್ರತಿನಿಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಈ ಬಾರಿ ಭಾರತವನ್ನು ನಂದಿನಿ ಗುಪ್ತಾ ಪ್ರತಿನಿಧಿಸಲಿದ್ದಾರೆ.
ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆದ ಭಾರತ ಮಂಟಪಂನಲ್ಲಿ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಸ್ಪರ್ಧೆಗೆ ತೆರೆ ಬೀಳಲಿದೆ. ಮಿಸ್ ವರ್ಲ್ಡ್ ಸಂಸ್ಥೆಯ ಸಿಇಒ ಜುಲಿಯಾ ಮೋರ್ಲೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದಿಂದ ಇದುವರೆಗೆ ರೀಟಾ ಫರಿಯಾ, ಐಶ್ವರ್ಯಾ ರೈ, ಡಯಾನಾ ಹೇಡನ್, ಯುಕ್ತಾ ಮುಖಿ, ಪ್ರಿಯಾಂಕಾ ಚೋಪ್ರಾ, ಮಾನುಷಿ ಚಿಲ್ಲರ್ ಅವರು ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯ ಕಿರೀಟ ಧರಿಸಿದ್ದಾರೆ.