ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಆಗಸ್ಟ್ ತಿಂಗಳಿಡಿ ಭಾರತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವ ಆಯೋಜಿಸುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಮಕ್ಕಳು ಭೇಟಿ ನೀಡಿದ ವೇಳೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದೊಂದು ಘಟನೆ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಕ್ಕಳಿಗಾಗಿ ಗಾಂಧಿ ಸ್ವರಾಜ್ದ ಕಥೆ ಮೊದಲಾದ ಸ್ವಾತಂತ್ರದ ಪುಸ್ತಕಗಳನ್ನು ಬಳಸಿ ಗಟ್ಟಿ ಓದು ಮಾಡಿಸುವುದು. ಗುಂಪು ಚರ್ಚೆ, ಭಾಷಣ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಮುಂತಾದ ಚಟುವಟಿಕೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ.
ಆಗಸ್ಟ್ ನಲ್ಲಿ ಗ್ರಂಥಾಲಯಕ್ಕೆ ಬರುವ ಎಲ್ಲಾ ಮಕ್ಕಳಿಗೆ ತ್ರಿವರ್ಣ ಧ್ವಜ, ಬ್ಯಾಡ್ಜ್ ತಯಾರಿಸಲು ತಿಳಿಸಲು ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಹೇಳಲಾಗಿದೆ. ಸಂವಿಧಾನದ ಮೂಲ ಆಶಯಗಳ ಬಗ್ಗೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲು ಪ್ರೇರೇಪಿಸುವಂತೆ ತಿಳಿಸಲಾಗಿದೆ. ಸ್ವಾತಂತ್ರ್ಯ ದಿನದ ಹಾಡುಗಳು, ದೇಶಭಕ್ತಿ ಗೀತೆಗಳ ಅಭ್ಯಾಸ ಮಾಡಲು ಮಕ್ಕಳನ್ನು ಒಟ್ಟುಗೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.