ನವದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಐದನೇ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿರುವುದು ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಅಗೌರವ ತಂದಿದೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಕ್ಷುಲ್ಲಕ ಬುದ್ದಿ ತೋರಿಸಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥ್ ಅವರು, ಪ್ರಧಾನಿ ಮೋದಿ ಕ್ಷುಲ್ಲಕ ಮನಸ್ಥಿತಿ ಹೊಂದಿರುವ ವ್ಯಕ್ತಿ. ಸಣ್ಣ ಮನಸ್ಸಿನವರಿಂದ ದೊಡ್ಡದನ್ನು ನಿರೀಕ್ಷಿಸುವುದು ವ್ಯರ್ಥ. ಸ್ವಾತಂತ್ರ್ಯ ದಿನಾಚರಣೆಯ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಐದನೇ ಸಾಲಿನಲ್ಲಿ ಕೂರಿಸುವ ಮೂಲಕ ನರೇಂದ್ರ ಮೋದಿ ತಮ್ಮ ಸಣ್ಣತನ ತೋರಿಸಿದ್ದಾರೆ. ಆದರೆ, ಇದು ರಾಹುಲ್ ಗಾಂಧಿಗೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತರಿಗೆ ಮುಂದಿನ ಸಾಲುಗಳನ್ನು ನಿಗದಿಪಡಿಸಿದ್ದರಿಂದ ಕಾಂಗ್ರೆಸ್ ಸಂಸದರನ್ನು ಹಿಂದಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ರಕ್ಷಣಾ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸುವ ಮತ್ತು ಆಸನ ಯೋಜನೆಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಪ್ರೋಟೋಕಾಲ್ ಪ್ರಕಾರ ವಿಪಕ್ಷ ನಾಯಕರಿಗೆ ಸಾಮಾನ್ಯವಾಗಿ ಮೊದಲ ಕೆಲವು ಸಾಲುಗಳಲ್ಲಿ ಸ್ಥಾನವನ್ನು ನೀಡಲಾಗುತ್ತದೆ.
ವಿರೋಧ ಪಕ್ಷದ ನಾಯಕನ ಸ್ಥಾನವು ಕ್ಯಾಬಿನೆಟ್ ಸಚಿವರದ್ದಾಗಿದೆ. ಸರ್ಕಾರದ ಸಚಿವರು ಮೊದಲ ಸಾಲಿನಲ್ಲಿ ಕುಳಿತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಮಾತ್ರ ಐದನೇ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿಲ್ಲ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಗದಿತ ಸ್ಥಳವೂ ಐದನೇ ಸಾಲಿನಲ್ಲಿದೆ ಎಂದು ಸುಪ್ರಿಯಾ ಹೇಳಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತರನ್ನು ಗೌರವಿಸಲು ಈ ರೀತಿ ಹಿಂದಿನ ಸಾಲು ನೀಡಲಾಗಿದೆ ಎಂಬ ಮೂರ್ಖ ಹೇಳಿಕೆ ರಕ್ಷಣಾ ಸಚಿವಾಲಯದಿಂದ ಬಂದಿದೆ. ಪದಕ ವಿಜೇತರನ್ನು ಗೌರವಿಸಬೇಕು ಮತ್ತು ವಿನೇಶ್ ಫೋಗಟ್ ಅವರನ್ನೂ ಕೂಡ ಗೌರವಿಸಬೇಕು. ಆದರೆ, ಅಮಿತ್ ಶಾ, ಜೆ.ಪಿ. ನಡ್ಡಾ, ಎಸ್. ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಗೌರವಿಸಲು ಬಯಸಲಿಲ್ಲವೇ? ಪ್ರತಿಪಕ್ಷದ ನಾಯಕನ ಸ್ಥಾನವೂ ಮುಖ್ಯವಾದುದು ಎಂದು ಹೇಳಿದ್ದಾರೆ.