ಬೆಂಗಳೂರು: ಎಸ್ಎಸ್ಎಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಸರ್ಕಾರಿ ನೌಕರರಿಗೆ ಒಂದು ಅವಧಿಯ ವೇತನ ಹೆಚ್ಚಳ(ಇನ್ ಕ್ರಿಮೆಂಟ್) ನಿರಾಕರಿಸಿದ್ದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಸರ್ಕಾರ ಪಿಂಚಣಿದಾರರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.
2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳಲ್ಲಿ ಇನ್ಕ್ರಿಮೆಂಟ್ ಮಂಜೂರು ಮಾಡುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಸೀತಾಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠದಿಂದ ಈ ನಿರ್ದೇಶನ ನೀಡಲಾಗಿದೆ.
ಆದೇಶ ಜಾರಿ ವಿಫಲವಾದಲ್ಲಿ ವಿಳಂಬವಾದ ಪ್ರತಿ ತಿಂಗಳಿಗೆ ಶೇಕಡ 7ರ ಬಡ್ಡಿ ದರ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ತಕ್ಷಣವೇ ಸರ್ಕಾರ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಂದ ಆ ಹಣ ವಸೂಲು ಮಾಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸೀತಾಲಕ್ಷ್ಮಿ ಅವರು ಎಸ್ಎಸ್ಎಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದು, ಮೂರು ದಶಕಗಳ ಸೇವೆಯ ನಂತರ 2016ರ ಅಕ್ಟೋಬರ್ 21ರಂದು ನಿವೃತ್ತರಾಗಿದ್ದರು. ಅವರಿಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ ಆಧಾರದಲ್ಲಿ ವೇತನ ಹೆಚ್ಚಳ ನೀಡಬೇಕು ಎಂಬ ನಿಯಮವಿತ್ತು. ಆದರೆ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಕೆಎಟಿಯಲ್ಲಿಯೂ ಅರ್ಜಿ ವಜಾ ಮಾಡಿದ್ದು, ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.