ಬೆಂಗಳೂರು: ಜನವರಿಯಿಂದ ರಾಜ್ಯದ ಜನತೆಗೆ ಮುದ್ರಾಂಕ ಶುಲ್ಕ ಬರೆ ಬೀಳಲಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ಮುಂದಾಗಿರುವ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿಯೇ ಕಾಯ್ದೆ ಮಂಡಿಸಲು ಮುಂದಾಗಿದೆ.
ಜನವರಿಯಿಂದ ಅನ್ವಯವಾಗುವಂತೆ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಇತ್ತೀಚೆಗಷ್ಟೇ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಲಾಗಿತ್ತು. ಈಗ ಎಲ್ಲಾ ದಾಖಲೆಗಳಿಗೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.
ಮನೆಗಳ ಬಾಡಿಗೆ ಕರಾರು, ಗುತ್ತಿಗೆ ಕರಾರು, ಬ್ಯಾಂಕ್ ಸಾಲದ ದಾಖಲೆಗಳು, ಪವರ್ ಆಫ್ ಅಟಾರ್ನಿ, ಒಪ್ಪಂದಗಳು, ಪ್ರಮಾಣ ಪತ್ರಗಳ ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.
ಪ್ರಸ್ತುತ ಪ್ರಮಾಣ ಪತ್ರಗಳಿಗೆ 20 ರೂ. ಶುಲ್ಕವಿದ್ದು, 100 ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. 10 ಲಕ್ಷ ರೂ. ವರೆಗಿನ ಒಪ್ಪಂದ ಪತ್ರಕ್ಕೆ 100 ರೂ. ಶುಲ್ಕವಿದ್ದು, 500 ರೂ. ಶುಲ್ಕ ವಿಧಿಸಲು ಪ್ರಸ್ತಾಪಿಸಲಾಗಿದೆ. ದತ್ತು ಡೀಡ್ ಶುಲ್ಕ 500 ರೂ. ನಿಂದ 1000 ರೂ., 1 ಲಕ್ಷ ರೂ.ವರೆಗಿನ ಚಿಟ್ ಒಪ್ಪಂದ ಶುಲ್ಕ 100 ರೂ.ನಿಂದ 500 ರೂ., ಸಾಲದ ದಾಖಲೆಗಳು ಶೇಕಡ 0.1 ರಿಂದ ಶೇಕಡ 0.5 ರಷ್ಟು, 1000 ರೂ. ಬಾಂಡ್ ಗೆ 100 ರಿಂದ 200 ರೂಪಾಯಿ, ಪವರ್ ಆಫ್ ಅಟಾರ್ನಿಗೆ 100 ರೂ.ನಿಂದ 500 ರೂ.ಶುಲ್ಕ ವಿಧಿಸುವ ಪ್ರಸ್ತಾವನೆ ಇದೆ.