ಎಲ್ಲರಿಗೂ ಕುಕ್ಕರ್ ನಿಂದ ಮಾಡಿದ ಅನ್ನ ಇಷ್ಟವಾಗಲ್ಲ. ಇನ್ನು ಕುಕ್ಕರ್ ನಲ್ಲಿ ಮಾಡಿದ ಅನ್ನ ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇದು ತಣ್ಣಗಾದ ಮೇಲೆ ತಿನ್ನುವುದಕ್ಕೆ ಚೆನ್ನಾಗಿರುವುದಿಲ್ಲ. ಆದರೆ ಪಾತ್ರೆಯಲ್ಲಿ ನೀರು ಕುದಿಸಿ ಅನ್ನ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಕುಕ್ಕರ್ ಗಿಂತ, ಪಾತ್ರೆಯಲ್ಲಿ ಮಾಡಿದ ಅನ್ನ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಅಕ್ಕಿಯನ್ನು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಗುಂಡಗಿನ ಪಾತ್ರೆಯಲ್ಲಿ ಮುಕ್ಕಾಲು ಪಾತ್ರೆಯಾಗುವಷ್ಟು ನೀರು ಹಾಕಿ ಅದು ಕುದಿ ಬರುವುದು ಬೇಡ. ಪಾತ್ರೆಯ ಕೆಳಭಾಗದಲ್ಲಿ ಚಿಕ್ಕ ಚಿಕ್ಕ ಕುದಿ ಗುಳ್ಳೆ ಬರುತ್ತಿದ್ದಂತೆ ಅದಕ್ಕೆ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ. ಗ್ಯಾಸ್ ಜೋರು ಉರಿಯಲ್ಲಿ ಇರಲಿ.
ಇದು ಚೆನ್ನಾಗಿ ಕುದಿ ಬಂದು ಮೇಲೆ ಉಕ್ಕು ಬರುತ್ತಿದ್ದಂತೆ ಗ್ಯಾಸ್ ಅನ್ನು ಸಣ್ಣ ಉರಿಗೆ ಇಡಿ. 15 ನಿಮಿಷಗಳ ಕಾಲ ಇದು ಚೆನ್ನಾಗಿ ಬೇಯಲಿ. ಅನ್ನ ಬೆಂದ ನಂತರ ಇದರ ನೀರನ್ನು ಬಸಿದುಕೊಳ್ಳಿ. ಹೀಗೆ ಮಾಡುವುದರಿಂದ ಅನ್ನ ಉದುರು ಉದುರಾಗಿರುತ್ತದೆ.